ಉಪ ಲೋಕಾಯುಕ್ತರಿಂದ ಗದಗ ಆಸ್ಪತ್ರೆ, ಕ್ರೀಡಾಂಗಣ ಪರೀಶೀಲನೆ

ಉಪ ಲೋಕಾಯುಕ್ತರಿಂದ ಗದಗ ಆಸ್ಪತ್ರೆ, ಕ್ರೀಡಾಂಗಣ ಪರೀಶೀಲನೆ  Upa Lokayukta inspects Gadag hospital and stadium


ಗದಗ 7: ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು ಶುಕ್ರವಾರ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.  

ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹೆರಿಗೆ ವಾರ್ಡ್ಗೆ ಭೇಟಿ ನೀಡಿದ ಅವರು, ದಾಖಲಾಗಿರುವ ಬಾಣಂತಿಯರೊಂದಿಗೆ ಸಂವಾದ ನಡೆಸಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆ, ಸೌಲಭ್ಯಗಳು ಹಾಗೂ ಸ್ವಚ್ಛತೆ ಕುರಿತು ಮಾಹಿತಿ ಪಡೆದರು.  

ಆಸ್ಪತ್ರೆಯ ಲಿಫ್ಟ್‌ ಅನ್ನು ಶೀಘ್ರ ದುರಸ್ತಿ ಮಾಡಬೇಕು. ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆ ದುರಸ್ತಿಗಾಗಿ ಈಗಾಗಲೇ ಕಳುಹಿಸಿರುವ ಕ್ರಿಯಾ ಯೋಜನೆಯ ಪ್ರತಿಯನ್ನು ಸಲ್ಲಿಸುವಂತೆ ತಿಳಿಸಿದರು.  ನಂತರ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ, ಓಷಧಗಳ ಲಭ್ಯತೆ ಹಾಗೂ ದಾಖಲೆಗಳನ್ನು ಪರೀಶೀಲಿಸಿದರು.  

ಬಳಿಕ ಜಿಲ್ಲಾ ಕ್ರೀಡಾಂಗಣದ ವಸತಿ ಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಊಟ, ಉಪಹಾರದ ಗುಣಮಟ್ಟ ಹಾಗೂ ಕ್ರೀಡಾ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಪಡೆದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ವಸತಿ ಶಾಲೆಯಲ್ಲಿನ ಸಮಸ್ಯೆಗಳನ್ನು ಆಲಿಸಿದರು.  

ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ಹೇಳಿಕೊಂಡರೆ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್‌., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್‌. ಶಿವನಗೌಡರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್‌., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀಲಗುಂದ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೊಗೆರಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.