ಸಿರುಗುಪ್ಪದಲ್ಲಿ ಬರ ಪರಿಸ್ಥಿತಿ ಪರೀಶೀಲನೆ: ರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ಕ್ರಮ : ಸಚಿವ ಬಿ. ನಾಗೇಂದ್ರ

ಸಿರುಗುಪ್ಪದಲ್ಲಿ ಬರ ಪರಿಸ್ಥಿತಿ ಪರೀಶೀಲನೆ: ರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ಕ್ರಮ : ಸಚಿವ ಬಿ. ನಾಗೇಂದ್ರ  Drought situation assessed in Siruguppa; measures to provide compensation for crop loss: Minister B.

ಬಳ್ಳಾರಿ, ಆ.7: ಸಿರುಗುಪ್ಪ ತಾಲೂಕಿನಲ್ಲಿ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ಬರ ನಿರ್ವಹಣೆಯ ಭಾಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಶುಕ್ರವಾರ ಸಿರುಗುಪ್ಪ ಸಮೀಪದ ಸಿದ್ದರಾಮಪುರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರೀಶೀಲಿಸಿದರು.  

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಾದ್ಯಂತ ರೈತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಪರೀಶೀಲಿಸಲಾಗುತ್ತಿದೆ. ರೈತರಿಂದ ಬೆಳೆ ನಷ್ಟದ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.  

ಸಿದ್ದರಾಮಪುರ ಗ್ರಾಮದ ರೈತ ಮಹಿಳೆ ರಾಜೇಶ್ವರಮ್ಮ ಅವರ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸಜ್ಜೆ ಬೆಳೆಯನ್ನು ಪರೀಶೀಲಿಸಿದ ಸಚಿವರು, ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಒಣಗಿರುವುದನ್ನು ಗಮನಿಸಿದರು. ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳಿಗೆ ರೈತರಿಗೆ ಬೆಳೆ ವಿಮೆ ಸೌಲಭ್ಯ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  

ಸಿರುಗುಪ್ಪ ತಾಲೂಕಿನಲ್ಲಿ ಮಳೆ ಕೊರತೆಯಿಂದ ಮುಂಗಾರು ಹಂಗಾಮು ಸಂಪೂರ್ಣ ವಿಫಲವಾಗುವ ಆತಂಕ ಎದುರಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಶೇ.25ಕ್ಕಿಂತ ಕಡಿಮೆ ಬಿತ್ತನೆ ಆಗಿರುವ ಪ್ರದೇಶಗಳಲ್ಲಿ ಮರುಬಿತ್ತನೆ ನಿಯಮದಡಿ ರೈತರಿಗೆ ರಕ್ಷಣೆ ದೊರೆಯಲಿದೆ ಎಂದು ಸಚಿವರು ತಿಳಿಸಿದರು.  

ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಸುಮಾರು 80 ಟಿಎಂಸಿ ನೀರು ಸಂಗ್ರಹವಾಗುವ ನೀರೀಕ್ಷೆಯಿದ್ದು, ಆದಷ್ಟು ಬೇಗ ಕಾಲುವೆಗಳಿಗೆ ಬೆಳೆಗಳಿಗೆ ಅನುಕೂಲವಾಗುವಂತೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.  

ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ತಾಲೂಕಿನ ಹಚ್ಚೊಳ್ಳಿ ಹೋಬಳಿ ಹೊರತುಪಡಿಸಿ ಉಳಿದ ಎಲ್ಲ ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಅಗತ್ಯ ನೆರವು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ವಿವಿಧ ರೈತ ಸಂಘಟನೆಗಳು ಹಾಗೂ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.  

ಸಚಿವರ ಭೇಟಿ ವೇಳೆ ಜಿಲ್ಲಾಧಿಕಾರಿ ಕೆ. ನಾಗೇಂದ್ರ ಪ್ರಸಾದ್, ಜಂಟಿ ಕೃಷಿ ನಿರ್ದೇಶಕ ಸೋಮಸುಂದರ, ತೋಟಗಾರಿಕೆ ಜಂಟಿ ನಿರ್ದೇಶಕ ಶಶಿಕಾಂತ್, ತಹಶೀಲ್ದಾರ್ ಗೌಸಿಯಾ ಬೇಗಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.