ಬೆಟಗೇರಿಯಲ್ಲಿ ವಿಶಿಷ್ಟವಾಗಿ ರಕ್ಷಾಬಂಧನ ಆಚರಣೆ

 ಬೆಟಗೇರಿಯಲ್ಲಿ ವಿಶಿಷ್ಟವಾಗಿ ರಕ್ಷಾಬಂಧನ ಆಚರಣೆ  Unique Raksha Bandhan celebration in Betageri

ಲೋಕದರ್ಶನ ವರದಿ 

ಬೆಟಗೇರಿ, ಆ.28: ನಮ್ಮ ನಾಡಿನಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಜ್ಞಾನಿಕ, ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಪ್ರೀತಿ, ವಿಶ್ವಾಸ, ಕಾಳಜಿ ಹಾಗೂ ಪರಸ್ಪರ ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಹಬ್ಬವೂ ಮಹತ್ವದ್ದಾಗಿದೆ ಎಂದು ಗೋಕಾಕ ತಾಲ್ಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ಹೇಳಿದರು.  

ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ರಕ್ಷಾಬಂಧನ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ಷಾಬಂಧನವು ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬವಾಗಿದೆ ಎಂದರು.  

ಶಾಲೆಯಲ್ಲಿ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸಲಾಯಿತು. 8ನೇ ತರಗತಿಯ ವಿದ್ಯಾರ್ಥಿನಿಯರು 10ನೇ ತರಗತಿಯ ವಿದ್ಯಾರ್ಥಿಗಳಿಗೆ, 9ನೇ ತರಗತಿಯ ವಿದ್ಯಾರ್ಥಿನಿಯರು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರು 9ನೇ ತರಗತಿಯ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದರು. ಶಿಕ್ಷಕಿಯರು ಹಾಗೂ ಮಹಿಳಾ ಸಿಬ್ಬಂದಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿನಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿದರು.  

ರಾಖಿ ಕಟ್ಟಿದ ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ವಿದ್ಯಾರ್ಥಿಗಳು ಶಿಕ್ಷಕಿಯರು ಹಾಗೂ ಮುಖ್ಯೋಪಾಧ್ಯಾಯರಿಗೆ ಸಿಹಿ ಹಾಲು ನೀಡಿ ಸಹೋದರತ್ವದ ಪ್ರೀತಿ, ವಾತ್ಸಲ್ಯ ಮೆರೆದರು. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣಪ್ರೇಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಕಾರ್ಯಕ್ರಮದಲ್ಲಿ ಸದಾನಂದ ತೇರೆಣ, ಶುಭಾ ಬಿ., ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಸಿರಾಜ್ ಅಹಮದ್ ಜಿಡ್ಡಿಮನಿ, ಭಾಗ್ಯಶ್ರೀ ನಾಯ್ಕ, ವೃತ್ತಿ ಮಾರ್ಗದರ್ಶಕ ಲಕ್ಕಪ್ಪ ವಾರೆಪ್ಪಗೋಳ, ದೀಪಾ ದಾಸಂಗಡಿ, ಸ್ವಾತಿ ಬಡಿಗೇರ, ಬಸವರಾಜ ಗೋಸಲಿ, ಮಂಜುನಾಥ ಸವತಿಕಾಯಿ, ನಾಗರಾಜ ಅರಳಿಮಟ್ಟಿ, ಸಿದ್ರಾಮೇಶ ಕಮತ, ಮಲ್ಲಪ್ಪ ಪೋಳ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣಪ್ರೇಮಿಗಳು ಉಪಸ್ಥಿತರಿದ್ದರು.