ಮೋಹನ್ ಭಾಗವತ್ ಹೇಳಿಕೆಗೆ ಕೇಂದ್ರ ಸಚಿವ ಅಥಾವಳೆ, ಎಂಐಎಂ ಸಂಸದ ಅಸದುದ್ದೀನ್ ತೀವ್ರ ಆಕ್ಷೇಪ

ಮುಂಬೈ,ಡಿ ೨೭,ಭಾರತೀಯರೆಲ್ಲರೂ  ಹಿಂದುಗಳು ಎಂಬ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)  ಮುಖ್ಯಸ್ಥ  ಮೋಹನ್ ಭಾಗವತ್ ಅವರ ಹೇಳಿಕೆಯನ್ನು   ಕೇಂದ್ರ ಸಚಿವ ರಾಮ್ ದಾಸ್  ಅಥಾವಳೆ, ಎಂಐಎಂ  ಸಂಸದ  ಅಸದುದ್ದೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತೀಯರೆಲ್ಲರೂ ಹಿಂದೂಗಳು ಎಂದು ಹೇಳುವುದು  ನ್ಯಾಯಯುತವಾದದ್ದಲ್ಲ  ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.ಹೈದರಾಬಾದ್‌ನ ಸರೂರ್ ನಗರ್  ಮೈದಾನದಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಸಾರ್ವಜನಿಕ ಸಭೆ  ಉದ್ದೇಶಿಸಿ ಮಾತನಾಡಿದ್ದ  ಮೋಹನ್ ಭಾಗವತ್,  "ಭಾರತದಲ್ಲಿ ಜನಿಸಿದವರೆಲ್ಲರೂ ಹಿಂದೂಗಳು.  ಮತಗಳು, ಸಂಪ್ರದಾಯಗಳು ವಿಭಿನ್ನವಾದರೂ  ಎಲ್ಲರೂ ಭಾರತ ಮಾತೆಯ ಮಕ್ಕಳು  ಎಂದು  ಹೇಳಿದ್ದರು. ಆರ್ ಎಸ್ ಎಸ್  ದೃಷ್ಟಿಯಲ್ಲಿ ೧೩೦ ಕೋಟಿ ಭಾರತೀಯರು ಹಿಂದುಗಳೇ ಎಂದು ಅವರು  ಅಭಿಪ್ರಾಯ ವ್ಯಕ್ತಪಡಿಸಿದ್ದರು.ಈ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ  ಖಾತೆ  ರಾಜ್ಯ ಸಚಿವ ರಾಮ್ ದಾಸ್ ಅಥಾವಳೆ, ಭಾರತೀಯರೆಲ್ಲರೂ ಹಿಂದೂಗಳು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಬೌದ್ಧರು  ಮಾತ್ರ ಇದ್ದರು. ಹಿಂದುತ್ವದ ಉಗಮದ ನಂತರ ನಮ್ಮ ದೇಶ ಹಿಂದೂ ರಾಷ್ಟ್ರವಾಗಿಬದಲಾಯಿತು.  ಭಾರತದಲ್ಲಿರುವ  ಎಲ್ಲರೂ  ಭಾರತೀಯರು ಎಂದು ಮೋಹನ್ ಭಾಗವತ್ ಹೇಳಿದ್ದರೆ ಚೆನ್ನಾಗಿತ್ತು. ನಮ್ಮ ದೇಶದಲ್ಲಿ ಬೌದ್ಧರು, ಸಿಖ್ಖರು, ಹಿಂದೂಗಳು, ಕ್ರಿಶ್ಚಿಯನ್ನರು, ಪಾರ್ಸಿಗಳು, ಜೈನರು ಮತ್ತು ಲಿಂಗಾಯತರು ಇದ್ದಾರೆ. ವಿವಿಧ  ಧರ್ಮಗಳನ್ನು  ಆಚರಿಸುವ ಜನರು ಇಲ್ಲಿ ವಾಸಿಸುತ್ತಿದ್ದಾರೆ  ಎಂದು ಹೇಳಿದ್ದಾರೆ.ರಾಂದಾಸ್ ಅಥಾವಳೆ  ಸಂವಿಧಾನ  ಶಿಲ್ಪಿ  ಡಾ.ಅಂಬೇಡ್ಕರ್ ಸ್ಥಾಪಿಸಿದ್ದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ  ಪಕ್ಷದ  ಅಧ್ಯಕ್ಷರಾಗಿದ್ದಾರೆ. ಏತನ್ಮಧ್ಯೆ, ಎಂಐಎಂ ಸಂಸದ ಅಸದುದ್ದೀನ್ ಒವೈಸಿ, ಕೂಡ ಮೋಹನ್ ಭಾಗವತ್ ಅವರ  ಹೇಳಿಕೆಗೆ  ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತದಲ್ಲಿ  ಕೇವಲ ಒಂದೇ ಧರ್ಮ ಇರಬೇಕು ಎಂದು ಆರ್‌ಎಸ್‌ಎಸ್ ಭಾವಿಸಿದೆ.  ಆದರೆ,  ಅಂಬೇಡ್ಕರ್  ಸಂವಿಧಾನ ಜಾರಿಯಲ್ಲಿರುವವರೆಗೆ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.