5 ಕೋಟಿ ರೂ. ವೆಚ್ಚದ ಜಿಲ್ಲಾ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

5 ಕೋಟಿ ರೂ. ವೆಚ್ಚದ ಜಿಲ್ಲಾ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ  Union Finance Minister Nirmala Sitharaman launches construction of District Cultural Theatre at a co

ವಿಜಯನಗರ(ಹೊಸಪೇಟೆ) 05: ಜಿಲ್ಲೆಯ ಸಾಂಸ್ಕೃತಿಕ ಮತ್ತು ರಂಗಭೂಮಿ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ನಿಟ್ಟಿನಲ್ಲಿ, ಸಂಸದರ ಅನುದಾದಡಿಯಲ್ಲಿ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲಾಗುತ್ತಿದ್ದು, ನಿರ್ಮಿತಿ ಕೇಂದ್ರವು ಇದರ ನಿರ್ಮಾಣದ ಹೊಣೆ ಹೊತ್ತಿದೆ. ಎಸ್ಬಿಐ ಸಿಎಸ್‌ಆರ್ ನಿಧಿಯಡಿ 99 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ಆವರಣದಲ್ಲಿಯೇ ನಿರ್ಮಿಸಲಾಗುವ ಉದ್ಯಾನವನ ಕಾಮಗಾರಿಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಾಲನೆ ನೀಡಿದರು.  

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿ ನೂತನ ಸಾಂಸ್ಕೃತಿಕ ರಂಗಮಂದಿರ ತಲೆಯೆತ್ತಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಇದು ಅತ್ಯಾಧುನಿಕ ವೇದಿಕೆಯಾಗಲಿದೆ. ಹಂಪಿ ಹಾಗೂ ವಿಜಯನಗರದ ಐತಿಹಾಸಿಕ ವಾಸ್ತುಶಿಲ್ಪದ ಪರಂಪರೆಯಿಂದ ಪ್ರೇರಿತವಾಗಲಿದೆ. ಸಂಸ್ಕೃತಿ, ಪ್ರದರ್ಶನ ಮತ್ತು ಸಾಂಸ್ಕೃತಿಕ ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೂರದೃಷ್ಟಿ ಹೊಂದಿರುವ ಈ ಸಂಕೀರ್ಣವು ಭವಿಷ್ಯದ ಸಾಂಸ್ಕೃತಿಕ ಪರಿಸರ ವ್ಯವಸ್ಥೆಗೆ ಪ್ರಮುಖ ಕೇಂದ್ರವಾಗಲಿದೆ. ಉದ್ದೇಶಿತ ಜಿಲ್ಲಾಡಳಿತ ಭವನದ ಸಮೀಪದಲ್ಲೇ ಸುಮಾರು 3 ಎಕರೆ ವಿಸ್ತೀರ್ಣದ ಜಾಗದಲ್ಲಿ ಈ ಕಲಾ ಸಂಕೀರ್ಣ ನಿರ್ಮಾಣವಾಗಲಿದ್ದು, ಸದ್ಯ 1.5 ಎಕರೆ ಜಮೀನಿನಲ್ಲಿ ಯೋಜನೆ ಆರಂಭಗೊಳ್ಳಲಿದೆ.  

ಜಾಗತಿಕ ಮಟ್ಟದ ಈ ಹೊಸ ಸಾಂಸ್ಕೃತಿಕ ಕೇಂದ್ರದ ನಿರ್ಮಾಣದಿಂದ ಇಲ್ಲಿನ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ, ನಾಟಕ, ಸಾಂಸ್ಕೃತಿಕ ಹಬ್ಬ, ರಂಗ ಚಟುವಟಿಕೆ ಹಾಗೂ ಪ್ರಮುಖ ಸರ್ಕಾರಿ-ಖಾಸಗಿ ಸಮಾರಂಭಗಳಿಗೆ ಅತ್ಯುತ್ತಮ ವೇದಿಕೆ ದೊರೆಯಲಿದೆ. ನೂತನ ಸಂಕೀರ್ಣದ ವಿಶಿಷ್ಟ ಪ್ರವೇಶ ಮಾರ್ಗವು ಕಲಾ ಪ್ರೇಮಿಗಳಿಗೆ ಹೊಸ ಅನುಭವ ನೀಡಲಿದೆ. ಪ್ರವೇಶ ದ್ವಾರ, ನಂತರ ಕಲ್ಲಿನ ರಥ, ರಂಗಮಂಟಪ, ಪ್ರವೇಶ ಮಂಟಪ, ಕಲಾ ಗ್ಯಾಲರಿ, ಮುಖ್ಯ ಸಭಾಂಗಣ ಇರಲಿದೆ. ರಂಗಮಂದಿರವು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ವಿನ್ಯಾಸದೊಂದಿಗೆ ಮುಖ್ಯ ಸಭಾಂಗಣದಲ್ಲಿ 500 ಆಸನಗಳನ್ನೊಳಗೊಂಡಿದ್ದು,

ಇದರಲ್ಲಿ 440 ಸಾರ್ವಜನಿಕ ಮತ್ತು 60 ವಿಐಪಿ ಆಸನಗಳು ಸೇರಿವೆ. ಅದಷ್ಟೇ ಅಲ್ಲದೇ 120 ಬಾಲ್ಕನಿ ಆಸನಗಳು, ಹಾಗೂ 48 ಮಿನಿ ಥಿಯೇಟರ್ ಆಸನಗಳ ವ್ಯವಸ್ಥೆ ಇರಲಿದೆ. ಕಲಾವಿದರ ಸೌಕರ್ಯಕ್ಕಾಗಿ ತಾಲೀಮು ಕೊಠಡಿ, ಎರಡು ಗ್ರೀನ್ ರೂಮ್ಸ್‌, ಮತ್ತು ಕಲಾವಿದರ ವಸತಿ ಕೊಠಡಿಗಳು. ಆಧುನಿಕ ರೆಕಾರ್ಡಿಂಗ್ ಮತ್ತು ಡಬ್ಬಿಂಗ್ ಸ್ಟುಡಿಯೋಗಞಳೂ ಸಹ ಇರಲಿವೆ. ಇದೇ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯೂ ಸಹ ಕಾರ್ಯನಿರ್ವಹಿಸಲಿದೆ.  ಈ ವೇಳೆ ಸಂಸದ ಇ.ತುಕಾರಾಂ, ಶಾಸಕ ಎಚ್‌.ಆರ್‌.ಗವಿಯಪ್ಪ,  ವಿತ್ತ ಸಚಿವರ ಆಪ್ತ ಕಾರ್ಯದರ್ಶಿ ಅನಿರುದ್ಧ್‌ ಶ್ರವಣ್,   ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್, ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ಜಿ.ಪಂ. ಸಿಇಒ ಅಕ್ರಂ ಷಾ, ಎಸ್ಪಿ ಎಸ್‌.ಜಾಹ್ನವಿ ಸೇರಿ ಇತರರಿದ್ದರು