ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಉಮೇಶ ಕತ್ತಿ : ಯತ್ನಾಳ

ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಉಮೇಶ ಕತ್ತಿ : ಯತ್ನಾಳ Umesh Katti is the pioneer of development in North Karnataka: Yathnal

ಸಂಕೇಶ್ವರ 25: ದಿವಂಗತ ಉಮೇಶ ಕತ್ತಿಯವರದು ನೇರ, ದಿಟ್ಟ ಮತ್ತು ನಿರಂತರ ಸ್ವಭಾವವನ್ನು ಹೊಂದಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಯಾವುದೇ ಮುಲಾಜಿಲ್ಲದೇ ದಿಟ್ಟವಾಗಿ ಹೇಳುತ್ತಿದ್ದರು. ಇವತ್ತು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗುತ್ತಿದೆ.  ಉಮೇಶ ಕತ್ತಿಯವರಂತಹ 10 ನಾಯಕರು ಉತ್ತರ ಕರ್ನಾಟಕದಲ್ಲಿ ಇದ್ದಿದ್ದರೆ ಇಂದು ನಾವು ಇಡೀ ರಾಜ್ಯವನ್ನು ಆಳುತ್ತಿದ್ದೇವು.  ಈಗಿನ ಹೆಚ್ಚಿನ ನಾಯಕರು ಮೂಕ ಬಸವಣ್ಣರಂತೆ ಕೇವಲ ತಲೆ ಅಲ್ಲಾಡಿಸುವವರಾಗಿದ್ದಾರೆ.  ಉತ್ತರ ಕರ್ನಾಟಕದ ಸಮಸ್ಯೆಗಳನ್ನು ನೇರವಾಗಿ ವಿಧಾನಸಭೆಯಲ್ಲಿ ಮಂಡಿಸುತ್ತಿಲ್ಲ.  ಇದು ಈ ಭಾಗದ ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು. 

ಉಮೇಶ ಕತ್ತಿ ಉತ್ತರ ಕರ್ನಾಟಕದ ಕನಸುಗಾರ ಗ್ರಂಥವನ್ನು ಲೋಕಾರೆ​‍್ಣ ಮಾಡಿ ಅವರು ಮಾತನಾಡುತ್ತಿದ್ದರು.   

ಉತ್ತರ ಕರ್ನಾಟಕದ ಕೂಗನ್ನು ವಿಧಾನಸಭೆಯಲ್ಲಿ ಎತ್ತುವವರೆಂದರೆ ತಾವು ಮತ್ತು ಉಮೇಶ ಕತ್ತಿಯವರು ಮಾತ್ರ. ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಪ್ರತ್ಯೇಕ ರಾಜ್ಯದ ಕೂಗನ್ನು ಕೂಡ ಅವರು ಎತ್ತಿದ್ದರು. ದಿವಂಗತ ಪ್ರಧಾನಿ ಅಟಲಬಿಹಾರಿ ವಾಜಪೇಯಿ ರಾಷ್ಟ್ರದ ಅಜಾತ ಶತ್ರುವಾಗಿದ್ದಂತೆ ರಾಜ್ಯದಲ್ಲಿ ಉಮೇಶ ಕತ್ತಿ ಇವರು ಅಜಾತ ಶತ್ರುವಾಗಿದ್ದರು. ಎಲ್ಲ ಪಕ್ಷಗಳ ನಾಯಕರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು.  8 ಬಾರಿ ಶಾಸಕರಾಗಿ ಆಯ್ಕೆಗೊಂಡು ಅನೇಕ ಬಾರಿ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಉತ್ತಮವಾಗಿ ಕೆಲಸ ಮಾಡಿದರು. ಆವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ತಮ್ಮ ಜನಪ್ರಿಯತೆ ಹಾಗೂ ವರ್ಚಸ್ಸಿನಿಂದ ಗೆದ್ದು ಬರುತ್ತಿದ್ದರು.  ಬೆಳಗಾವಿ ಜಿಲ್ಲೆಯ ಜನಪ್ರಿಯ ನಾಯಕರಾಗಿ, ಸಚಿವರಾಗಿ ಉಸ್ತುವಾರಿ ಸಚಿವರಾಗಿ ಪ್ರಸಿದ್ಧಿಯನ್ನು ಪಡೆದರು.  ಉತ್ತರ ಕರ್ನಾಟಕದ ಈ ಭಾಗದ ಜನರು ತಮ್ಮ ಕೆಲಸಗಳಿಗಾಗಿ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರದ ಪ್ರಮುಖ ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಉಮೇಶ ಕತ್ತಿಯವರು ವಿಜಯಪುರಕ್ಕೆ ಬಂದಾಗ ತಮ್ಮ ಜೀವಸ್ಯ ಕಂಠಸ್ಯ ಎ.ಬಿ.ಪಾಟೀಲ ಹಾಗೂ ಕತ್ತಿ ಇವರು ಒಂದಾಗುವಂತೆ ತಮ್ಮ ಮನದಾಳದ ಮಾತನ್ನು ಹೇಳಿದ್ದನ್ನು ಸ್ಮರಿಸಿದರು.  ಈಗ ಎ.ಬಿ.ಪಾಟೀಲ ಮತ್ತು ಕತ್ತಿ ಸಹೋದರರು ಒಂದಾಗಿರುವುದು ತಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು. 

ದಿವಂಗತ ಉಮೇಶ ಕತ್ತಿ ಇವರ ಗ್ರಾಮ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಈ ಗ್ರಂಥ ಲೋಕಾರೆ​‍್ಣ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಬೆಳಗಾವಿ ದಕ್ಷಿಣ ವಲಯದ ಶಾಸಕ ಅಭಯ ಪಾಟೀಲ, ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಖಾನಾಪೂರದ ಶಾಸಕ ವಿಠ್ಠಲ ಹಲಗೇಕರ, ಬೆಳಗಾವಿ ಗ್ರಾಮೀಣ ಭಾಗದ ಮಾಜಿ ಶಾಸಕ ಸಂಜಯ ಪಾಟೀಲ, ಬೆಳಗಾವಿ ಉತ್ತರ ವಲಯದ ಶಾಸಕ ಅನಿಲ ಬೆನಕೆ, ಮೊದಲಾದ ಎಲ್ಲ ಧುರೀಣರು ಮಾತನಾಡಿ, ನಮ್ಮ ರಾಜ್ಯ ಜನಶಕ್ತಿ, ವ್ಯಕ್ತಿತ್ವ ಧೀಮಂತ ನಾಯಕ ಉಮೇಶ ಕತ್ತಿ ಇವರಾಗಿದ್ದರು. ಸದಾಕಾಲ ರೈತರ ಬಗ್ಗೆ ಚಿಂತನೆ ಮಾಡುತ್ತಿದ್ದ ಬಗ್ಗೆ ಉಮೇಶ ಕತ್ತಿ ಅವರ ವ್ಯಕ್ತಿತ್ವ ಹಾಗೂ ಪ್ರಬುದ್ಧ ರಾಜಕಾರಣಿಯ ಬಗ್ಗೆ ಈ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.   

ನಿಡಸೋಸಿಯ ಶ್ರೀಗಳು ಹಾಗೂ ಭಾಗವಹಿಸಿದ ಎಲ್ಲ ಶಾಸಕರು, ನಾಯಕರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ ಬಾಬಣ್ಣ ಹುಕ್ಕೇರಿ ಇವರು ವಹಿಸಿದ್ದರು.  ಹುಕ್ಕೇರಿ ಹಾಗೂ ಸಂಕೇಶ್ವರ ಪುರಸಭೆಯ ಸದಸ್ಯರು ವೇದಿಕೆಯ ಮೇಲೆ ಆಸೀನರಾಗಿದ್ದರು.   

ಹುಕ್ಕೇರಿ ಮತಕ್ಷೇತ್ರದ ಶಾಸಕ ನಿಖಿಲ ಕತ್ತಿ ಇವರು ಸ್ವಾಗತಿಸಿದರು. ಚಿಕ್ಕೋಡಿಯ ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಬೆಳಗಾವಿ ನಿರ್ದೇಶಕ ರಮೇಶ ವಿಶ್ವನಾಥ ಕತ್ತಿ ಇವರು ತಮ್ಮ ಸಹೋದರ ಅಗಲಿಕೆಯಿಂದ ಭಾವುಕರಾಗಿ ತಮ್ಮ ಭಾಷಣದಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಕಾಣದ ಕೈಗಳು ಹಣಬಲ ಮತ್ತು ತೋಳ್ಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಎಂಟ್ರಿ ಹೊಡೆದು ತಾಲೂಕು ಹಾಗೂ ಜಿಲ್ಲೆಯ ಸಹಕಾರಿ ಸಂಘ ಸಂಸ್ಥೆಗಳಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಮ್ಮ ಮತದಾರರು ಸೂಕ್ತ ಉತ್ತರವನ್ನು ಕೊಡಲು ಸನ್ನದ್ಧರಾಗಿದ್ದಾರಲ್ಲದೇ,  ಹೊರಗಿನಿಂದ ಬಂದ ಈ ಸುಂಟರಗಾಳಿಯನ್ನು ಅದೇ ಮಾದರಿಯಲ್ಲಿಯೇ ಹೊರಹಾಕುವುದಾಗಿ ರಮೇಶ ಕತ್ತಿ ಇವರು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.   

ಪೃಥ್ವಿ ರಮೇಶ ಕತ್ತಿ, ಪವನ ರಮೇಶ ಕತ್ತಿ, ವಿನಯಗೌಡಾ ಅಪ್ಪಯ್ಯಗೌಡಾ ಪಾಟೀಲ, ಗಜಾನನ ಕ್ವಳ್ಳಿ, ಸುನೀಲ ಪರ್ವತರಾವ, ನಂದು ಮುಡಶಿ, ಸಾಗರ ಜಕಾತೆ, ಹರಗಾಪೂರಗಡದ ಸಂದೀಪ ಪಾಟೀಲ, ರೋಹನ ನೇಸರಿ, ಕುಮಾರ ಬಸ್ತವಾಡಿ, ಸುಭಾಷ ಕಾಸಾರಕರ, ಗಂಗಾರಾಮ ಭೂಸಗೋಳ್, ಹರುಣ ಮುಲ್ಲಾ, ಮೊದಲಾದ ಗಣ್ಯ ವ್ಯಕ್ತಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ವಿಶ್ವರಾಜ ಸಕ್ಕರೆ ಕಾರಖಾನೆ ಬೆಲ್ಲದ ಬಾಗೇವಾಡಿ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕತ್ತಿ ಮತ್ತು ಎ.ಬಿ.ಪಾಟೀಲರ ಅಭಿಮಾನಿಗಳು ಸೇರಿದ್ದರು.