ಧಾರವಾಡದಲ್ಲಿ ಯುಗಾದಿ ಕವಿಗೋಷ್ಠಿ ಹಾಗೂ ಬೇಂದ್ರೆ ಗೀತ ಗಾಯನ ಕಾರ್ಯಕ್ರಮ

ಧಾರವಾಡದಲ್ಲಿ ಯುಗಾದಿ ಕವಿಗೋಷ್ಠಿ ಹಾಗೂ ಬೇಂದ್ರೆ ಗೀತ ಗಾಯನ ಕಾರ್ಯಕ್ರಮ Ugadi poetry gathering and Bendre song singing program in Dharwad

ಲೋಕದರ್ಶನ ವರದಿ 

ಧಾರವಾಡ 16 : ಬೇಂದ್ರೆ ಅದಮ್ಯ ಕವಿ, ಅದ್ಭುತ ವ್ಯಕ್ತಿತ್ವ, ಕವಿತ್ವ, ಬೇಂದ್ರೆಯವರಿಗೆ ಬೇಂದ್ರೆಯವರೇ ಸಾಟಿಯಾಗಿದ್ದಾರೆ.  ಬೇಂದ್ರೆಯವರು ಜಾನಪದವನ್ನು ಶಿಷ್ಟ ರೂಪದಲ್ಲಿ ರಚಿಸಿ, ಭಾವಕ್ಕೆ ತಕ್ಕಂತೆ ಭಾಷೆಯನ್ನು ಕೈಹಿಡಿದು ನಡೆಸಿದ ಕವಿಯಾಗಿದ್ದಾರೆ ಎಂದು ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.   

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌(ರಿ), ಧಾರವಾಡ ವತಿಯಿಂದ  ಡಾ.ದ.ರಾ.ಬೇಂದ್ರೆ ಭವನ, ಇಲ್ಲಿ ಏರಿ​‍್ಡಸಿದ್ದ ಯುಗಾದಿ ಕವಿಗೋಷ್ಠಿ ಹಾಗೂ ಬೇಂದ್ರೆ ಗೀತ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಕವಯಿತ್ರಿ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡುತ್ತಾ, ಕಾವ್ಯ ಎಲ್ಲರಲ್ಲೂ ಇರುವ ಮಾನವೀಯ ಸೆಲೆಯಾಗಿದೆ. ಕಾವ್ಯ ರಚನೆಗೆ ಪ್ರತಿಭೆ ಮುಖ್ಯ. ಹೊಸ ಕವಿಗಳಿಗೆ ಓದಿನ ಅಗತ್ಯವಿದೆ. ಓದು ನಮ್ಮ ಅನುಭವವನ್ನು ಹಿಗ್ಗಿಸುತ್ತದೆ. ನಮ್ಮ ಗ್ರಹಿಕೆಯ ಸೆಲೆಯನ್ನು ನಾವು ಸೂಕ್ಷ್ಮಗೊಳಿಸುವ ಕಾರ್ಯ ನಿರಂತರ ನಡೆಯುತ್ತಿರಬೇಕು.  ಆಗ ಮಾತ್ರ ಗುಣಾತ್ಮಕ ಕವಿತೆಗಳು ರಚನೆಗೊಳ್ಳಲು ಸಾಧ್ಯವಾಗುತ್ತದೆ ಎಂದರು.   

ಬೇಂದ್ರೆಯವರು ಒಬ್ಬ ದಾರ್ಶನಿಕ ಕವಿಯಾಗಿದ್ದರು.  ಅವರ ಕವನಗಳನ್ನು ಆಯಾ ವಯಸ್ಸಿಗೆ ತಕ್ಕಂತೆ ಅರ್ಥೈಸುತ್ತವೆ.  ಇಂದಿನ ಹೊಸ ಕವಿಗಳಿಗೆ ನಾದದ ಮಾಧುರ್ಯದ ಅರಿವಿಲ್ಲ, ಅರ್ಥಸಾಂದ್ರತೆ ಮುಖ್ಯ ಅನಿಸುವುದಿಲ್ಲ, ತಟ್ಟನೆ ಮನಸ್ಸನ್ನು ಸೆಳೆಯಬಲ್ಲದ ಆಕರ್ಷಕವಾದ ಕಾವ್ಯದ ಸೆಳೆತ ಬರಬೇಕು ಅನ್ನುವ ಹಂತಕ್ಕೆ ಬಂದು ನಿಂತಿದ್ದಾರೆ.  ಕಾವ್ಯದ ಮೂಲ ದ್ರವ್ಯ ಭಾವವಾಗಿದೆ.  ಭಾವದ ಹಿಂದೆ ಭಾಷೆ ಇರುತ್ತದೆ.  ಲಯವೇ ಕವಿತೆಯ ಜೀವಾಳವಾಗಿದೆ ಎಂದರು. ಹಿರಿಯ ಸಾಹಿತಿ ಡಾ. ವಾಯ್‌.ಎಮ್‌.ಯಾಕೊಳ್ಳಿ ಎಲ್ಲ ಕವಿಗಳ ಕವನ ವಾಚನದ ಆಶಯಗಳನ್ನು ವಿವರಿಸಿದರು.   

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ ಡಾ. ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಯುಗಾದಿ ಅಂದರೆ ಬೇಂದ್ರೆ, ಶ್ರಾವಣ ಅಂದರೆ ಬೇಂದ್ರೆ ಅನ್ನುವ ನಿಟ್ಟಿನಲ್ಲಿ ಯುಗಾದಿ ಕವಿಗೋಷ್ಠಿಯನ್ನು ಬೇಂದ್ರೆ ಭವನದಲ್ಲಿ ಆಯೋಜನೆ ಮಾಡಲಾಗಿದೆ.  ಇನ್ನು ಮುಂದೆ ಹೊಸ ಕವಿಗಳಿಗೆ ಯಾವ ರೀತಿ ಕವಿತೆಗಳನ್ನು ಬರೆಯಬೇಕು ಎನ್ನುವುದರ ಕುರಿತು “ಕಾವ್ಯ ಕಮ್ಮಟ” ಏರಿ​‍್ಡಸಲಾಗುವುದು ಎಂದರು.    

ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಕವಿಗೋಷ್ಠಿಯ ಸಂಚಾಲಕರಾದ ಡಾ.ಶರಣಮ್ಮ ಗೊರೇಬಾಳ ಪ್ರಾಸ್ತಾವಿಕ ಮಾತನಾಡಿದರು. ಡಾ. ಅಶೋಕ ಶೆಟ್ಟರ ವಂದಿಸಿದರು.  ವೇದಿಕೆಯಲ್ಲಿ ಟ್ರಸ್ಟ್‌ ಸದಸ್ಯರಾದ ಡಾ. ಶಿಲಾಧರ ಮುಗಳಿ, ಪ್ರಭು ಕುಂದರಗಿ ಉಪಸ್ಥಿತರಿದ್ದರು.    

ಹಿರಿಯ ಕವಿ ಸಿ.ಎಂ.ಚನ್ನಬಸಪ್ಪ, ಶ್ರೀವಲ್ಲಭ ಕುಲಕರ್ಣಿ, ಪ್ರಕಾಶ ಕಡಮೆ, ಗಾಯತ್ರಿ ರವಿ, ಡಾ. ನಾಗರೇಖಾ ಗಾಂವಕರ, ಡಾ. ಸಂತೋಷ ನಾಯಿಕ, ಅನಿತಾ ಮಂಜುನಾಥ, ಸುಮಾ ಕಾಟ್ಕರ್, ವಿನೂತಾ ಹಂಚಿನಮನಿ, ಡಾ. ಶೇಖರ್ ಸಜ್ಜನ್, ಸಂಪತ್‌ಕುಮಾರ ಕಿಚಡಿ, ಹೆಬಸೂರು ರಂಜಾನ್, ಜೋಸೆಫ್ ಮಲ್ಲಾಡಿ, ರಾಮಚಂದ್ರ ಕುಲಕರ್ಣಿ, ನಾಗೇಶ ನಾಯಕ, ಆನಂದ ಭೋವಿ, ರಾಜಶೇಖರ ಬಿರಾದಾರ, ವಿಠ್ಠಲ ದಳವಾಯಿ, ಡಾ.ಮಲ್ಲಿಕಾರ್ಜುನ ಛಬ್ಬಿ, ಶ್ರೀಶೈಲ ಹೆಬ್ಬಳ್ಳಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಯುಗಾದಿ, ಯುದ್ಧ, ಪ್ರಕೃತಿ ಹಾಗೂ ಬೇಂದ್ರೆ ಕುರಿತಾದ ವಿಶಿಷ್ಠ ಕವನಗಳನ್ನು ವಾಚಿಸಿದರು.     ಇದೇ ಸಂದರ್ಭದಲ್ಲಿ ಡಾ.ಕೃಷ್ಣ ಸುತಾರ, ಸುಕನ್ಯಾ ಬಡಿಗೇರ ಮತ್ತು ತಂಡ, ಕಲಕೇರಿ ಸಂಗೀತ ವಿದ್ಯಾಲಯ ಇವರಿಂದ ದ.ರಾ.ಬೇಂದ್ರೆ ಗೀತ ಗಾಯನ ಜರುಗಿತು.