ಕೊರೊನಾ ಪೀಡಿತ ಬ್ರಿಟನ್ ಪ್ರಧಾನಿ ಚೇತರಿಕೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರ್ಥನೆ

ವಾಷಿಂಗ್ಟನ್, ಏ ೬, ಕೊರೊನಾ ವೈರಾಣು ಸೋಂಕಿನಿಂದ ಬಳಲುತ್ತಿರುವ ಬ್ರಿಟನ್ ಪ್ರಧಾನ ಮಂತ್ರಿ  ಬೋರಿಸ್ ಜಾನ್ಸನ್  ಆದಷ್ಟು  ಬೇಗ   ಚೇತರಿಸಿಕೊಳ್ಳಲಿ  ಎಂದು ಅಮೆರಿಕಾ   ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರೈಸಿದ್ದಾರೆ. ಭಾನುವಾರ ಕೊರೊನಾ  ವೈರಸ್  ಕುರಿತು  ಮಾಧ್ಯಮಗಳೊಂದಿಗೆ  ಮಾತನಾಡಿದ  ಅವರು,  ಕೊರೊನಾ ವೈರಸ್ ನೊಂದಿಗೆ   ಹೋರಾಡುತ್ತಿರುವ  ಬೋರಿಸ್ ಜಾನ್ಸನ್  ಅವರಿಗೆ  ಒಳ್ಳೆಯದಾಗಲಿ  ಎಂದು  ಅಮೆರಿಕಾ ಪರವಾಗಿ  ಪ್ರಾರ್ಥಿಸುತ್ತೇವೆ.   ಬೋರಿಸ್   ನನ್ನ ಒಳ್ಳೆಯ  ಸ್ನೇಹಿತ,  ಒಳ್ಳೆಯ ವ್ಯಕ್ತಿ.   ಇಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಖಂಡಿತವಾಗಿಯೂ ಚೇತರಿಸಿಕೊಳ್ಳಲಿದ್ದಾರೆ ಎಂದು  ನಾನು ಭಾವಿಸುತ್ತೇನೆ ಎಂದು  ಟ್ರಂಪ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ  ಕ್ವಾರಂಟೈನ್ ನಲ್ಲಿ  ಇದ್ದುಕೊಂಡು  ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ   ಬೋರಿಸ್ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈರಸ್  ಕೆಲ ರೋಗ ಲಕ್ಷಣಗಳು  ಶಮನಗೊಳ್ಳದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಪ್ರಸ್ತುತ  ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈವರೆಗೆ ಬ್ರಿಟನ್‌ನಲ್ಲಿ ೪೭,೮೦೬  ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ೪, ೯೩೪ ಮಂದಿ ಮೃತಪಟ್ಟಿದ್ದಾರೆ. ವಿಶ್ವಾದ್ಯಂತ ೧೩ ಲಕ್ಷ  ಕೊರೊನಾ  ಪ್ರಕರಣಗಳು  ವರದಿಯಾಗಿದ್ದು  ೬೯ ಸಾವಿರದ ೪೫೯ ಮಂದಿ ಸಾವನ್ನಪ್ಪಿದ್ದಾರೆ.