ಮುಖ್ಯಮಂತ್ರಿಯ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್: ಕೋಲ್ಕತ್ತಾ ಪೊಲೀಸ್‌ನ ಇಬ್ಬರು ಡಿಸಿಗಳು ಅಮಾನತು

ಮುಖ್ಯಮಂತ್ರಿಯ ಕುರಿತು ಅವಹೇಳನಕಾರಿ ಸಾಮಾಜಿಕ ಜಾಲತಾಣ ಪೋಸ್ಟ್: ಕೋಲ್ಕತ್ತಾ ಪೊಲೀಸ್‌ನ ಇಬ್ಬರು ಡಿಸಿಗಳು ಅಮಾನತು Two Kolkata Police Deputy Commissioners Suspended Over Alleged Derogatory Social Media Posts

ಕೋಲ್ಕತ್ತಾ, ಜುಲೈ 10 : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸ್‌ನ ಡೆಪ್ಯುಟಿ ಕಮಿಷನರ್ (ಡಿಸಿ) ಹುದ್ದೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ.

ಅಮಾನತುಗೊಂಡ ಅಧಿಕಾರಿಗಳು ಉತ್ತರ ವಿಭಾಗ–3ರ ಡಿಸಿ ಬಿಧಾನ್ ಸಾಹಾ ಹಾಗೂ ಬಂದರು ವಿಭಾಗ–2ರ ಡಿಸಿ ಪಾರ್ಥ ಪ್ರತೀಮ್ ದಾಸ್.

ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತಾ ಪೊಲೀಸ್ ಮುಖ್ಯ ಕಚೇರಿಯ ಮೂಲಗಳ ಪ್ರಕಾರ, ಡಿಸಿ ಪಾರ್ಥ ಪ್ರತೀಮ್ ದಾಸ್ ಅವರು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಯನ್ನು ಟೀಕಿಸುವ ವಿವಾದಾತ್ಮಕ ವಿಡಿಯೊವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ರೀತಿಯ ಆರೋಪ ಉತ್ತರ ವಿಭಾಗ–3ರ ಡಿಸಿ ಬಿಧಾನ್ ಸಾಹಾ ಅವರ ಮೇಲೂ ಕೇಳಿಬಂದಿದೆ.

ಇದಕ್ಕೂ ಮುನ್ನ ಕೋಲ್ಕತ್ತಾ ಪೊಲೀಸ್ ಆಯುಕ್ತರು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ತಪ್ಪು ಅಥವಾ ವಿವಾದಾತ್ಮಕ ಸಂದೇಶಗಳು ಸಾರ್ವಜನಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದಾಗಿ ಆ ಸೂಚನೆಯಲ್ಲಿ ಎಚ್ಚರಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ಮಟ್ಟದ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.