ಲಂಡನ್ 14: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಟ್ರಂಪ್ ಬ್ರಿಟನ್ ಪ್ರವಾಸ ನಡೆದ ಒಂದು ಘಟನೆಗೆ ಟ್ವಿಟರ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಡೆದಿರುವ ಘಟನೆಗೆ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಶುಕ್ರವಾರ ಟ್ರಂಪ್ ದಂಪತಿಗಳು ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ ಹಲವು ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟಿಗರು ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಿಗದಿತ ಪ್ರದೇಶಕ್ಕೆ ರಾಣಿಗಿಂತಲೂ ಮುಂಚಿತವಾಗಿ ಆಗಮಿಸಬೇಕಾಗುತ್ತದೆ, ಆದರೆ ಟ್ರಂಪ್ ಬ್ರಿಟನ್ ರಾಣಿಯನ್ನೇ ತಮಗಾಗಿ ಕಾಯಿಸಿದ್ದಾರೆ. ಇಷ್ಟೇ ಅಲ್ಲದೇ ಸ್ವಾಗತ ಸಮಾರಂಭದಲ್ಲಿ ರಾಣಿಯನ್ನು ಬಿಟ್ಟು ತಾವೇ ಮುಂದೆ ನಡೆದು ಹೋಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ.