ಅಗತ್ಯವಿದ್ದಾಗ ನೆರವಿಗೆ ಬರುವವರೇ ನಿಜವಾದ ಸ್ನೇಹಿತರು: ಮೀನಾಕ್ಷಿ ಬಣ್ಣದಭಾವಿ

ಅಗತ್ಯವಿದ್ದಾಗ ನೆರವಿಗೆ ಬರುವವರೇ ನಿಜವಾದ ಸ್ನೇಹಿತರು: ಮೀನಾಕ್ಷಿ ಬಣ್ಣದಭಾವಿ True friends are those who come to one's aid when needed: Meenakshi Bannadabhavi.

ಕೊಪ್ಪಳ, ಆ. ೨೪: ಅಗತ್ಯವಿದ್ದಾಗ ನೆರವಿಗೆ ಬರುವವರು ಬುದ್ಧಿವಂತರು; ಅಗತ್ಯವನ್ನೂ ಮೀರಿ ನಮ್ಮೊಂದಿಗೆ ನಿಂತು, ಹೃದಯಪೂರ್ವಕವಾಗಿ ಬೆಂಬಲಿಸುವವರೇ ನಿಜವಾದ ಸ್ನೇಹಿತರು ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಭಾವಿ ಹೇಳಿದರು. 

ನಗರದ ಇನ್ನರ್ ವೀಲ್ ಕ್ಲಬ್ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ನೇಹ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಮಾಡುವ ಕರ್ಮವೇ ನಮ್ಮನ್ನು ಕಾಪಾಡುತ್ತದೆ. ಆದ್ದರಿಂದ ಇತರರ ಬದುಕಿನಲ್ಲಿ ಬೆಳಕು ಮೂಡಿಸುವಂತಹ ಒಳ್ಳೆಯ ಕೆಲಸಗಳನ್ನು ಮಾಡುವುದು ನಿಜವಾದ ಸ್ನೇಹದ ಸಂಕೇತವಾಗಿದೆ ಎಂದರು. 

ಮುಂದುವರಿದು ಮಾತನಾಡಿದ ಅವರು, ನಮ್ಮ ಮಾತುಗಳಲ್ಲಿ ತಪ್ಪು ಹುಡುಕುವವರ ಮುಂದೆ ಎಂದಿಗೂ ಪರಿಪೂರ್ಣರಾಗಲು ಸಾಧ್ಯವಿಲ್ಲ. ಆದರೆ ನಮ್ಮ ಒಳ್ಳೆಯತನವನ್ನು ನಮ್ಮ ಅಂತರಾತ್ಮ ಗುರುತಿಸಿದರೆ ಸಾಕು. ಬಡತನದ ದಿನಗಳು ಕಳೆದು ಹೋಗಬಹುದು, ಸಂಪತ್ತು ಮುಂದೆ ಬರಬಹುದು; ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತು ಸ್ನೇಹ ಮತ್ತೆ ದೊರೆಯುವುದು ಕಷ್ಟ. ಆದ್ದರಿಂದ ಪರಸ್ಪರ ಸ್ನೇಹ ಮತ್ತು ಮಾನವೀಯತೆಯ ಭಾವನೆ ಬೆಳೆಸಿಕೊಂಡು ಜೀವನ ಸಾಗಿಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. 

ಯುವತಿಯರಿಗೆ ಮುಟ್ಟಿನ ಆರೋಗ್ಯದ ಕುರಿತು ಜಾಗೃತಿ 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಲಬ್ನ ಮಾಜಿ ಅಧ್ಯಕ್ಷೆ ಪ್ರತಿಮಾ ಪಟ್ಟಣಶೆಟ್ಟಿ ಅವರ ಪುತ್ರಿ ಡಾ. ಕವಿತಾ ಪಟ್ಟಣಶೆಟ್ಟಿ ಅವರು ವಿಶೇಷ ಉಪನ್ಯಾಸ ನೀಡಿ, ಯುವತಿಯರಲ್ಲಿ ಮುಟ್ಟಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದರು. 

ವೈದ್ಯರು ಹಾಗೂ ಕ್ಲಬ್ ಸದಸ್ಯರ ನಡುವೆ ನಡೆದ ಸಂವಾದ ಕಾರ್ಯಕ್ರಮ ಆಸಕ್ತಿದಾಯಕವಾಗಿದ್ದು, ಸಂವಾದಾತ್ಮಕವಾಗಿ ಯಶಸ್ವಿಯಾಗಿ ನೆರವೇರಿತು. ಡಾ. ಕವಿತಾ ಪಟ್ಟಣಶೆಟ್ಟಿ ಅವರ ವಿಶೇಷ ಕಾಳಜಿ ಹಾಗೂ ಕಾರ್ಯವನ್ನು ಕ್ಲಬ್ ಅಧ್ಯಕ್ಷೆ ಮೀನಾಕ್ಷಿ ಬಣ್ಣದಭಾವಿ ಶ್ಲಾಘಿಸಿ, ಕ್ಲಬ್ ಪರವಾಗಿ ಅಭಿನಂದಿಸಿದರು. 

ವಿವಿಧ ಕ್ರೀಡಾ ಸ್ಪರ್ಧೆಗಳು 

ಸ್ನೇಹ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಕ್ಲಬ್ನ ಐಎಸ್‌ಒ ಲತಾ ಪಟ್ಟಣಶೆಟ್ಟಿ ಬಹುಮಾನ ವಿತರಿಸಿದರು. 

ಯುವ ಅಭಿವೃದ್ಧಿ ಯೋಜನೆಯಡಿ ಕ್ರೀಡೆ ಹಾಗೂ ಟೈಲರಿಂಗ್ ವೃತ್ತಿಯಲ್ಲಿ ಆಸಕ್ತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ರಾಜಮ್ಮ ಅವರನ್ನು ಕ್ಲಬ್ ವತಿಯಿಂದ ದತ್ತು ಪಡೆಯಲಾಯಿತು. ವಿದ್ಯಾರ್ಥಿನಿಯ ಸರ್ವತೋಮುಖ ಅಭಿವೃದ್ಧಿಗೆ ಕ್ಲಬ್ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಅಧ್ಯಕ್ಷೆ ಮೀನಾಕ್ಷಿ ಬಣ್ಣದಭಾವಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಕ್ಲಬ್ನ ಹಿರಿಯ ಸದಸ್ಯೆ ಡಾ. ರಾಧಾ ಕುಲಕರ್ಣಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.