ಗುರು ಪೂರ್ಣಿಮೆ ಅಂಗವಾಗಿ ಶ್ರೀ ಬಸವಲಿಂಗೇಶ್ವರರಿಗೆ ಸನ್ಮಾನ

ಗುರು ಪೂರ್ಣಿಮೆ ಅಂಗವಾಗಿ ಶ್ರೀ ಬಸವಲಿಂಗೇಶ್ವರರಿಗೆ ಸನ್ಮಾನ  Tribute to Sri Basavalingeshwara on the occasion of Guru Purnima

ಯಲಬುರ್ಗಾ, ಜು.30: ಗುರು ಪೂರ್ಣಿಮೆಯ ಅಂಗವಾಗಿ ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಬುಧವಾರ ಇನರ್ ವೀಲ್ ಕ್ಲಬ್ ಹಾಗೂ ಬಸವಲಿಂಗೇಶ್ವರ ಅಕ್ಕನ ಬಳಗದ ವತಿಯಿಂದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳಿಗೆ ಸನ್ಮಾನ ಸಲ್ಲಿಸಿ ಗುರು ಪೂರ್ಣಿಮೆ ಆಚರಿಸಲಾಯಿತು.  

ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿಗಳು, ಅಜ್ಞಾನದ ಅಂಧಕಾರವನ್ನು ದೂರ ಮಾಡಿ ದೈವಿಕ ಜ್ಞಾನದ ಬೆಳಕನ್ನು ತೋರಿಸುವವರೇ ಗುರುಗಳು ಎಂದು ಹೇಳಿದರು.  

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ದಿನ ಗುರುಗಳನ್ನು ಸ್ಮರಿಸಿ, ಅವರ ಆಶೀರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿಯ ಮಹತ್ವದ ಪರಂಪರೆಯಾಗಿದೆ. ‘ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವವನು ಎಂಬ ಅರ್ಥವಿದ್ದು, ಅಜ್ಞಾನವನ್ನು ದೂರ ಮಾಡಿ ಜ್ಞಾನ ಮಾರ್ಗ ತೋರಿಸುವವರೇ ಗುರುಗಳು ಎಂದು ವಿವರಿಸಿದರು.  

ಇನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ ಮುರಡಿಮಠ ಮಾತನಾಡಿ, ಜೀವನದಲ್ಲಿ ಗುರುಗಳ ಸ್ಥಾನ ಅತ್ಯಂತ ಶ್ರೇಷ್ಠವಾಗಿದೆ. ಗುರುಗಳ ಮಾರ್ಗದರ್ಶನವಿಲ್ಲದೆ ಯಾವುದೇ ವಿದ್ಯೆ ಅಥವಾ ಸಾಧನೆ ಸಾಧ್ಯವಿಲ್ಲ ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಸಂದೇಶದ ಅಂಗವಾಗಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತೊರೆದು ಬಟ್ಟೆ ಚೀಲಗಳನ್ನು ಬಳಸುವಂತೆ ಜಾಗೃತಿ ಮೂಡಿಸಲಾಯಿತು.  ಈ ಸಂದರ್ಭದಲ್ಲಿ ಸುನೀತಾ ಎಂ. ಪತಂಗರಾಯ, ಜ್ಯೋತಿ ಪಲ್ಲೇದ, ಶ್ರೀದೇವಿ ಭೀಮನಗೌಡರ, ಲತಾ ಕಲ್ಯಾಣಿ, ಕವಿತಾ ಕಳಕನಗೌಡರ, ಶಾರದಾ ಕೊಣ್ಣೂರ ಸೇರಿದಂತೆ ಇನರ್ ವೀಲ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.