ಆಧುನಿಕ ಸಮಾಜದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಕಾಡು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮಹಿಳೆಯರು

ಆಧುನಿಕ ಸಮಾಜದ ಸೌಲಭ್ಯಗಳಿಂದ ವಂಚಿತರಾಗುತ್ತಿರುವ ಕಾಡು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮಹಿಳೆಯರು Tribal women living in wild and backward areas are deprived of the facilities of modern society

ವಿಜಯಪುರ 04 :  ಮಹಿಳೆಯರು ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡುತ್ತಿದ್ದರೂ ಇಂದಿಗೂ ಲಿಂಗ ಅಸಮಾನತೆ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ವಿಷಾಧಿಸಿದರು. 

ನಗರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು ಇವರ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಉತ್ತರ ಕರ್ನಾಟಕ ಭಾಗದ ಬುಡಕಟ್ಟು ಮಹಿಳೆಯರ ಸಬಲೀಕರಣ: ಸಮಸ್ಯೆಗಳು ಹಾಗೂ ಸವಾಲುಗಳು’ ಎಂಬ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಡು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮಹಿಳೆಯರು ಇಂದು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ, ಆಧುನಿಕ ಸಮಾಜದ ಅನೇಕ ಸೌಲಭ್ಯಗಳಿಂದ ಅವರು ಇನ್ನೂ ವಂಚಿತರಾಗಿರುವುದು ವಿಷಾದನೀಯವಾಗಿದೆ.  

ನಗರ, ಗ್ರಾಮ ಮತ್ತು ಆದಿವಾಸಿ ಸಮುದಾಯಗಳ ಮಹಿಳೆಯರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಅವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಅವರಿಗೆ ಸೂಕ್ತ ಮಾನ್ಯತೆ ಮತ್ತು ಅವಕಾಶಗಳನ್ನು ಕಲ್ಪಿಸುವ ಪ್ರಯತ್ನಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು. 

ಇದೇ ಸಂದರ್ಭದಲ್ಲಿ ಸಮಾಜಮುಖಿ ಚಿಂತಕ ಡಾ.ಡಿ.ಜಿ.ಸಾಗರ್ ಮಾತನಾಡಿ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯನಲ್ಲಿ ಆಯೋಜಿಸಿದ ರಾಷ್ಟ್ರೀಯ ವಿಚಾರಸಂಕಿರಣವು ಸ್ವಾಗತಾರ್ಹವಾಗಿದೆ. ಸಮಾಜದಲ್ಲಿ ಮಹಿಳೆಯರ ಮೇಲಿನ ತಾರತಮ್ಯ ಮತ್ತು ಅಸಮಾನತೆ ಇನ್ನೂ ಮುಂದುವರಿದಿರುವ ನಡುವೆಯೂ ಮಹಿಳೆಯರು ಚೇತರಿಸಿಕೊಂಡು ಮುಂದೆ ಸಾಗುತ್ತಿದ್ದಾರೆ. ಅವರಿಗೆ ವಿಶೇಷ ಪ್ರೋತ್ಸಾಹ ಅಗತ್ಯವೆಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ಬುಡಕಟ್ಟು ಮಹಿಳೆಯರ ಕುರಿತು ಸಾಕಷ್ಟು ಸಾಹಿತ್ಯ ಮತ್ತು ಚಲನಚಿತ್ರಗಳಿದ್ದರೂ ಅವರ ನೈಜ ಬದುಕನ್ನು ಸಮರ​‍್ಕವಾಗಿ ಪ್ರತಿಬಿಂಬಿಸಲು ಸಾಧ್ಯವಾಗಿಲ್ಲ. ಇಂತಹ ವಿಚಾರ ಸಂಕಿರಣಗಳು ಅವರನ್ನು ಸಮಾಜದ ನೆಲೆಯಲ್ಲಿ ಗುರುತಿಸಲು ನೆರವಾಗುತ್ತವೆ ಎಂದು ಹೇಳಿದರು. 

ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾದ ಡಾ.ಅರವಿಂದ್‌ಎನ್ ಹಳಂದಕರ್ ಮಾತನಾಡಿ, ಆದಿವಾಸಿಗಳಿಗೆ ಯೋಗ್ಯವಾದ ಗೌರವ ನೀಡುವುದರ ಜೊತೆಗೆ ಅವರ ಸಂರಕ್ಷಣೆಗೆ ಸಮರ​‍್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಬುಡಕಟ್ಟು ನಾಯಕ ವಾಸುದೇವ ಕಾಳೆ, ಹರಣ ಶಿಕಾರಿ ಸಮುದಾಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಬುಡಕಟ್ಟು ಸಮುದಾಯಗಳ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಕೇವಲ ಚರ್ಚೆಗಳು ಸಾಕಾಗುವುದಿಲ್ಲ. ನಾವು ಸ್ವತಃ ಆ ಪ್ರದೇಶಗಳಿಗೆ ಭೇಟಿ ನೀಡಿ ಅವರ ಜೀವನಶೈಲಿ ಮತ್ತು ಸಂಕಷ್ಟಗಳನ್ನು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳುತ್ತ, ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  

ಈ ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಗುರುತಿಸಿ 9 ಜನ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೋಧಕರು ಮತ್ತು ಬೋಧಕೇತರರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಗೀತಾ ಮತ್ತು ಹರ್ಷಿತಾ ಪ್ರಾರ್ಥಿಸಿದರು. ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ವಿವಿಯ ಯುಜಿ ಬ್ಲಾಕ್‌ನ ವಿಶೇಷ ಅಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಸ್ವಾಗತಿಸಿದರು. ಡಾ.ವೆಂಕಟೇಶ ಟಿ.ಎಸ್ ನಿರೂಪಿಸಿದರು. ಡಾ.ರಾಮಕೃಷ್ಣಯ್ಯ ಡಿ.ಸಿ. ವಂದಿಸಿದರು