ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಣೆ ಽ ಮೂಕ ವೇದನೆ ಕೇಳುವವರಿಲ್ಲ ಎತ್ತುಗಳಿಗೆ ಭಾರ, ಲಗಾಮು ಹಾಕುವರಾರು

ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಣೆ ಽ ಮೂಕ ವೇದನೆ ಕೇಳುವವರಿಲ್ಲ ಎತ್ತುಗಳಿಗೆ ಭಾರ, ಲಗಾಮು ಹಾಕುವರಾರು Transporting sugarcane in a bullock cart: No one listens to the silent suffering. Who is there to re

                ಮಾಂಜರಿ 18:ಎತ್ತಿನ ಜೋಡಿಯ ಕೊರಳಿಗೆ ಎತ್ತಿನ ಗಾಡಿ ಅದರಲ್ಲಿ ನಾಲ್ಕರಿಂದ ಐದು ಟನ್ ಕಬ್ಬು ಹೇರಿ ಕಬ್ಬಿನ ಗದ್ದೆಯಿಂದ ಕಾರ್ಖಾನೆಯವರೆಗೆ ಐದರಿಂದ ಆರು ಕಿಮೀವರೆಗೆ ಈ ಮೂಕ ಜೀವಗಳು ಎಳೆಯಬೇಕಾದರೆ ಪರಿಸ್ಥಿತಿ ಏನಾಗಬಹುದೆಂದು ಊಹಿಸಲು ಸಾಧ್ಯವೇ ಇಲ್ಲ. ಮೂಕವೆ ಮೂಕವೇದನೆಗೆ ಲಗಾಮು ಹಾಕುವರು ಯಾರು ಎಂಬ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ. ಚಿಕ್ಕೋಡಿ ತಾಲೂಕಿನ ತಗ್ಗು-ದಿನ್ನೆ ರಸ್ತೆಗಳಲ್ಲಿ ಕಬ್ಬು ತುಂಬಿದ ಎತ್ತಿನ ಗಾಡಿ ಎಳೆಯಲು ಪರದಾಡುತ್ತಿರುವಾಗ ಹೆಗಲ ಮೇಲೆ ನಾಲ್ಕರಿಂದ ಐದು ಟನ್ ಭಾರ ಹಿಂದಿನಿಂದ ಬಾರಕೋಲ ಏಟು ಗೋಣು ಕೆಳಗೆ ಹಾಕಿ ಈ ಎತ್ತಿನ ಜೋಡಿ ಪಡುತ್ತಿರುವ ವೇದನೆ ನೋಡಲಾಗದು. 

            ಇದು ಕೇವಲ ಗಡಿ ಗ್ರಾಮಗಳ ಪರಿಸ್ಥಿತಿ ಅಲ್ಲ, ಈ ಪರಿಸ್ಥಿತಿ ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಪರಿಸರದಲ್ಲಿ ನೋಡಲು ಸಿಗುತ್ತದೆ. ಕೆಲವರು ಎತ್ತಿನ ಗಾಡಿಯಲ್ಲಿ ಮೂರು ಟನ್ ಕಬ್ಬು ಸಾಗಿಸುತ್ತಾರೆ. ಇನ್ನೂ ಕೆಲವರು ನಾಲ್ಕರಿಂದ ಐದು ಟನ್‌ವರೆಗೆ ಕಬ್ಬು ಸಾಗಿಸುತ್ತಾರೆ. ಎತ್ತಿನಗಾಡಿಯನ್ನು ಮೂಕ ಜೀವಗಳ ಕೊರಳಿಗೆ ಕಟ್ಟಿ ಎಳಸೋದು ಯಾವ ನ್ಯಾಯ ಎಂಬ ಪ್ರಶ್ನೆ ಪ್ರಜ್ಞಾವಂತರದ್ದಾಗಿದೆ. ಕಬ್ಬನ್ನು ಕೆಲವರು ಟ್ರ್ಯಾಕ್ಟರ್ ಅಥವಾ ಲಾರಿ ಮೂಲಕ ಕಾರ್ಖಾನೆಗೆ ಸಾಗಿಸುತ್ತಾರೆ. ಲಾರಿ ಹಾಗೂ ಟ್ರ್ಯಾಕ್ಟರ್ ಮೂಲಕ ಕಬ್ಬು ಸಾಗಿಸಲು ಕಾರ್ಖಾನೆಯ ಅಧಿಕಾರಿಗಳು ಬೇಗ ಪರ್ಮಿಟ್ ಕೊಡೊದಿಲ್ಲ. ಹೀಗಾಗಿ ಪರ್ಮಿಟ್ ಇಲ್ಲದೆ ಎತ್ತಿನ ಗಾಡಿಯ ಮೂಲಕ ಕಬ್ಬು ಸಾಗಿಸಲಾಗುತ್ತದೆ.

           ಒಂದು ಎತ್ತಿನ ಜೋಡಿ ಐದು ಟನ್ ಕಬ್ಬು ತುಂಬಿದ ಚಕ್ಕಡಿಯನ್ನು ಐದೋ ಹತ್ತೋ ಕಿಮೀ ದೂರದವರೆಗೆ ಎಳೆದುಕೊಂಡು ಹೋಗುವುದು ಸುಲಭದ ಮಾತಲ್ಲ. ಈ ಮೂಕ ವೇದನೆ ನಿನ್ನೆಯದಲ್ಲ. ಹಲವಾರು ದಶಕಗಳ ವೇದನೆ ಇದಾಗಿದೆ. ಆದರೆ ಕಾರ್ಖಾನೆ ಮಾಲಿಕರು ಈ ಬಗ್ಗೆ ತೆಲೆಕೆಡಿಸಿಕೊಳ್ಳುವುದಿಲ್ಲ. ಒಬ್ಬ ಮಾನವನಾಗಿ ಮತ್ತೊಬ್ಬ ಮಾನವನ ಮೇಲೆ ಕರುಣೆ ತೋರಿದರೆ ಸಾಲದು. ಮಾನವ ಸಕಲ ಜೀವ ಸಂಕುಲದ ಮೇಲೆ ಕರುಣೆ ತೋರುವುದು ನಿಜವಾದ ಧರ್ಮ. ಈ ಮೂಕ ವೇದನೆ  ನಿಲ್ಲಿಸಲು ರಾಜ್ಯ ಸರ್ಕಾರ ಚಕ್ಕಡಿಯಲ್ಲಿ ಕಬ್ಬು ಸಾಗಾಣೆ ನಿಲ್ಲಿಸಬೇಕು. ಅದನ್ನು ರಾಜ್ಯದಲ್ಲಿ ನಿಷೇಧಿಸುವ ಕಾನೂನು ಜಾರಿಗೆ ತರಬೇಕು. ರಾಜ್ಯದಲ್ಲಿ ವ್ಯಾಪಕವಾಗಿರುವ ಈ ಮೂಕವೇದನೆಗೆ ಲಗಾಮು ಹಾಕುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆಎನ್ನುತ್ತಾರೆ ರೈತ ಹೋರಾಟಗಾರ ಹಾಗೂ ಹಸಿರು ಸೇನೆ ಅಧ್ಯಕ್ಷ ಚಿಕ್ಕೋಡಿಯ ಮಂಜುನಾಥ್ ಪರಗೌಡ