ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆ

ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆ Toll Collection Monitoring Committee Meeting

ಲೋಕದರ್ಶನ ವರದಿ 

ಗದಗ  27: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆಯು ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌. ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್‌. ಅವರು ಮಾತನಾಡಿ ಜಿಲ್ಲಾ ಪಂಚಾಯತ್ ಹಾಗೂ ಅಧೀನ ಬರುವ ಕಚೇರಿಗಳಿಂದ ವಿವಿಧ ಯೋಜನೆಗಳಡಿ ಪ್ರಾರಂಭವಾಗಿರುವ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಶೇ 1 ಅ ರಷ್ಟು ಸುಂಕ ಭರಿಸಿರುವುದನ್ನು  ಪರೀಶೀಲಿಸಲು ಸೂಚಿಸಿದರು.

ಯಾವುದೇ ಸರ್ಕಾರದ ಇಲಾಖೆ, ಸಾರ್ವಜನಿಕ ಪ್ರಾಧಿಕಾರ / ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಕಡಿತ ಮಾಡಿದ ಅಥವಾ ವಸೂಲು ಮಾಡಿದ ಸುಂಕವನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಕಲ್ಯಾಣ ಮಂಡಳಿಗೆ ರವಾನಿಸದಿದ್ದಲ್ಲಿ, ಸದರಿ ಸುಂಕವನ್ನು ಮಂಡಳಿಗೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು ಈ ಕುರಿತು ಸಭೆ ಜರುಗಿಸಬೇಕು ಎಂದು ನಿರ್ದೇಶನ ನೀಡಿದರು. 

ಸರ್ಕಾರದ ಇಲಾಖೆಗಳು ಅಥವಾ ಸಾರ್ವಜನಿಕ ಉದ್ದಿಮೆಗಳು ಯಾವುದೇ ನಿರ್ಮಾಣ ಕಾಮಗಾರಿಯನ್ನು ನಡೆಸಿದ್ದಲ್ಲಿ ಅಂತಹ ಇಲಾಖೆಗಳು ಅಥವಾ ಸಾರ್ವಜನಿಕ ಉದ್ದಿಮೆಗಳು ನಿರ್ಮಾಣ ಕಾಮಗಾರಿಯ ವೆಚ್ಚವನ್ನು ಪಾವತಿಸುವಾಗ ಪಾವತಿಯ ಮೂಲದಲ್ಲೇ ಶೇ 1 ರಷ್ಟು ಸುಂಕವನ್ನು ಹಾಗೂ ಯಾವುದೇ ವ್ಯಕ್ತಿಗೆ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ನಗರ ಸ್ಥಳೀಯ ಸಂಸ್ಥೆಗಳು ನಕ್ಷೆ ಅನುಮೋದನೆ ಅಥವಾ ಪರವಾನಿಗೆ ನೀಡಿದ್ದಲ್ಲಿ ಹೀಗೆ ಪರವಾನಿಗೆ ಅಥವಾ ನಕ್ಷೆ ಅನುಮೋದನೆ ನೀಡುವ ಸಮಯದಲ್ಲಿ ಶೇ 1 ರಷ್ಟು ಸುಂಕವನ್ನು ಪಡೆದುಕೊಂಡು ಮಂಡಳಿಗೆ ರವಾನಿಸಬೇಕು.

ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ನೀಡಿದ ನಕ್ಷೆ, ಅನುಮೋದನೆ ಅಥವಾ ನಿರ್ಮಾಣ ಪರವಾನಿಗೆ ಪರೀಶೀಲನೆ ನಡೆಸಿ ಮಾಲೀಕರು, ನಿಯೋಜಕರಿಂದ ವಸೂಲು ಮಾಡಿದ ಸುಂಕವನ್ನು ಮಂಡಳಿಗೆ ರವಾನಿಸಿದ ಕುರಿತು ಪರೀಶೀಲನೆ ನಡೆಸಬೆಕೆಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ,  ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ,  ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ  ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು. ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಸರ್ವರಿಗೂ ಸ್ವಾಗತಿಸಿ ವಂದಿಸಿದರು.