ಬೆಂಗಳೂರು 10: ಜಗವನ್ನು ಬೆಳಗುವ ಸೂರ್ಯ ನಾಳೆ ಕೆಲಕಾಲ ಮಂಕಾಗಲಿದ್ದು, ಭಾಗಶಃ ಸೂರ್ಯ ಗ್ರಹಣ ಕಂಡುಬರಲಿದೆ. ಇದು ಈ ವರ್ಷದ ಮೂರನೇ ಸೂರ್ಯ ಗ್ರಹಣವಾಗಿದೆ.
ಈ ಹಿಂದೆ ಕಳೆದ ಫೆಬ್ರವರಿ ಮತ್ತು ಜುಲೈನಲ್ಲಿ ಸೂರ್ಯ ಗ್ರಹಣ ಸಂಭವಿಸಿತ್ತು. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣ ಮಧ್ಯಾಹ್ನ 1.02 ಕ್ಕೆ ಆರಂಭವಾಗಲಿದ್ದು, ಮೂರೂವರೆ ಗಂಟೆಗಳ ಕಾಲ ಗ್ರಹಣ ಗೋಚರವಾಗಲಿದೆ. ಆದರೆ ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚರಿಸುವುದಿಲ್ಲ. ಉತ್ತರ ಹಾಗೂ ಪೂರ್ವ ಯುರೋಪ್,
ಉತ್ತರ ಅಮೆರಿಕಾದ ಉತ್ತರ ಭಾಗ, ಏಷ್ಯಾದ ಉತ್ತರ ಮತ್ತು ಪಶ್ಚಿಮದ ಕೆಲವು ಭಾಗದಲ್ಲಿ ಮಾತ್ರ ಗೋಚರಿಸಲಿದೆ. ರಾಜ್ಯದಲ್ಲಿ ಗ್ರಹಣ ಗೋಚರ ಆಗುವುದಿಲ್ಲವಾದ್ದರಿಂದ ಯಾವುದೇ ಆಚರಣೆ ಬೇಕಾಗಿಲ್ಲ. ದೇಗುಲಗಳ ಕ್ಷೇತ್ರ ಎಂದು ಖ್ಯಾತಿ ಪಡೆದ ಮಲ್ಲೇಶ್ವರದ ಎಲ್ಲಾ ದೇವಸ್ಥಾನಗಳಲ್ಲಿ ಪೂಜೆ ಕೈಂಕರ್ಯ ಮಾಮೂಲಾಗಿ ನಡೆಯಲಿವೆ.
ನಾಳೆ ಬೆಳಗ್ಗೆ ಆಷಾಢ ಮುಗಿದು ಶ್ರಾವಣ ಆರಂಭವಾಗುತ್ತದೆ. ಹೀಗಾಗಿ ದೇವಸ್ಥಾನಗಳಲ್ಲಿ ಹೆಚ್ಚೆಚ್ಚು ಪೂಜೆಗಳು ನಡೆಯಲಿವೆ.
ಕಾಡು ಮಲ್ಲೇಶ್ವರ, ಗಂಗಮ್ಮ ದೇವಸ್ಥಾನ, ನಂದಿ ತೀರ್ಥ, ಲಕ್ಷೀನರಸಿಂಹ ಸ್ವಾಮಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ವೇಣುಗೋಪಾಲಸ್ವಾಮಿ ದೇವಸ್ಥಾನ ಹೀಗೆ ಎಲ್ಲಾ ದೇವಾಲಯಗಳಲ್ಲಿ ಶ್ರಾವಣ ಮಾಸದ ಪೂಜೆ ನೆರವೇರುತ್ತವೆ.
ಕಾಡು ಮಲ್ಲೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗಂಗಾಧರ್ ಮಾತನಾಡಿ, ನಾಳೆ ಸೂರ್ಯ ಗ್ರಹಣ ಇದೆ. ಆದರೆ ಅದರ ಆಚರಣೆ ನಮಗೆ ಇಲ್ಲ. ನಾಳೆ ಎಂದಿನಂತೆ ದೇವಸ್ಥಾನ ತೆರೆಯಲಾಗತ್ತೆ. ಬೆಳಗಿನ ಪೂಜಾ ಕಾರ್ಯಗಳನ್ನ ನೆರೆವೇರಿಸಲಾಗತ್ತೆ. ಸಾಕಷ್ಟು ಜನ ಪಂಚಾಗ ನೋಡಿದವ್ರು ನಮ್ಮನ್ನ ಕೇಳಿದ್ದಾರೆ. ಆದರೆ ಇದರಿಂದ ದೇಶದ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಅವರು ಉತ್ತರ ನೀಡಿದ್ದಾರೆ.