ನ್ಯೂಯಾರ್ಕ, ಅ 16: ಅಮೆರಿಕಾದ ಇಮ್ಮಿಗ್ರೇಷನ್(ವಲಸೆ) ನೀತಿಯಲ್ಲಿ ತ್ವರಿತ ಬದಲಾವಣೆ ತರಬೇಕು. ಉತ್ತಮ ಕೌಶಲ್ಯ ಹೊಂದಿರುವ ವಿದೇಶಿ ಕೆಲಸಗಾರರು ದೇಶ ಪ್ರವೇಶಿಸಲು ಅವಕಾಶ ನೀಡಬೇಕು ಹಾಗೂ ಅಮೆರಿಕದ ಆರ್ಥಿಕ ಬೆಳವಣಿಗೆ, ಭವಿಷ್ಯದ ತಂತ್ರಜ್ಞಾನ ಪುನರ್ರಚನೆಗೆ ಪೂರಕವಾಗಿ ದೇಶದ ವಲಸೆ ನೀತಿಯನ್ನು ಪರಿಷ್ಕರಿಸಬೇಕು ಎಂದು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಅಮೆರಿಕಾ ಸಂಸತ್ತಿನ ನಾಯಕರಿಗೆ 51 ಬಿಸಿನೆಸ್ ಸ್ಕೂಲ್ಗಳ ಒಕ್ಕೂಟ ಬಹಿರಂಗ ಪತ್ರ ಬರೆದಿದೆ.
ಈ ಪತ್ರವನ್ನು ವಾಲ್ ಸ್ಟ್ರೀಟ್ ಜನರಲ್ ಪತ್ರಿಕೆ ಬುಧವಾರ ಪ್ರಕಟಿಸಿದೆ ಈ ಪತ್ರಕ್ಕೆ ಯೇಲ್, ಕೊಲಂಬಿಯಾ, ಸ್ಟ್ಯಾನ್ಫೋರ್ಡ, ಡ್ಯೂಕ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.
ಅವರು ತಮ್ಮ ಪತ್ರದಲ್ಲಿ, ವಿವಿಧ ದೇಶಗಳಿಗೆ ನೀಡಲಾಗಿರುವ ವೀಸಾಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು, ಎಚ್ -1 ಬಿ ವೀಸಾ ವ್ಯವಸ್ಥೆಯನ್ನು ಸುಧಾರಿಸಬೇಕು, ಇದರಿಂದಾಗಿ ಹೆಚ್ಚು ನುರಿತ ಕೆಲಸಗಾರರು ಅಮೆರಿಕಾಗೆ ಬರಲು ಸಾಧ್ಯವಾಗಲಿದೆ. ಕೌಶಲ್ಯ ಪೂರ್ಣ ದುಡಿಮೆದಾರರು ಅಮೆರಿಕಾಗೆ ಬರುವುದನ್ನು ಪ್ರೋತ್ಸಾಹಿಸಲು 'ಹಾರ್ಟ್ ಲ್ಯಾಂಡ್ ವೀಸಾ ಕೋಡ್' ಜಾರಿಗೆ ತರಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಹಳೆಯ ಕಾನೂನುಗಳು, ವಲಸೆಯ ಮೇಲೆ ದೇಶವಾರು ನಿರ್ಬಂಧಗಳು ಮತ್ತು ಇತ್ತೀಚಿನ ಅಸ್ಥಿರ ಸನ್ನಿವೇಶಗಳಿಂದಾಗಿ ಉನ್ನತ ಕೌಶಲ್ಯಹೊಂದಿರುವ ವಲಸಿಗರು ದೇಶಕ್ಕೆ ಬರದಂತೆ ತಡೆಯುತ್ತಿವೆ, ದೇಶದ ಆರ್ಥಿಕ ಬೆಳವಣಿಗೆಗೆ ಈ ದುಡಿಮೆದಾರರ ಆಗಮನ ಪ್ರಮುಖವಾಗಿದೆ ಎಂದು ಒಕ್ಕೂಟ ಹೇಳಿದೆ.
ಕಳೆದ ಮೂರು ವರ್ಷಗಳಲ್ಲಿ ಅಮೆರಿಕಾ ವಿಶ್ವವಿದ್ಯಾಲಯಗಳು ಮತ್ತು ಬಿಸಿನೆಸ್ ಶಾಲೆಗಳಲ್ಲಿ ಕಲಿಯುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಪ್ರತಿಭೆ ಮತ್ತು ನೈಪುಣ್ಯತೆಯ ಕೊರತೆ ದೀರ್ಘಾವಧಿಯಲ್ಲಿ ಅಮೆರಿಕಾದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕಾ ವಿಧಿಸಿದ ನಿರ್ಬಂಧಗಳ ಮಿತಿಗಳಿಂದಾಗಿ ಎಚ್ -1 ಬಿ ವೀಸಾಗಳು ಗಮನಾರ್ಹವಾಗಿ ಕುಸಿದಿವೆ, 2004ರಲ್ಲಿ 95,000 ಕ್ಕೂ ಹೆಚ್ಚು ಎಚ್ -1 ಬಿ ವೀಸಾಗಳನ್ನು ನೀಡಲಾಗಿತ್ತು. ಪ್ರಸ್ತುತ, ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲಿ ಎಚ್ -1 ಬಿ ವೀಸಾಗಳ ತಿರಸ್ಕರಿಸಿರುವ ಸಂಖ್ಯೆಯ ಪ್ರಮಾಣ ಹೆಚ್ಚಾಗಿದೆ, 2015 ರಲ್ಲಿ ಕೇವಲ ಶೇ 6ರಷ್ಟು ವಲಸೆದಾರರಿಗೆ ಮಾತ್ರವೇ ವೀಸಾ ನಿರಾಕರಿಸಲಾಗಿತ್ತು ಆದರೆ, 2019ದಲ್ಲಿ ಈ ಪ್ರಮಾಣ ಶೇ. 32 ಕ್ಕೆ ಏರಿದೆ ಎಂದು ಅಂಕಿ ಅಂಶ ನೀಡಿದ್ದಾರೆ.
ಅಷ್ಟು ಮಾತ್ರವಲ್ಲದೆ, ಎಚ್ -1 ಬಿ ವೀಸಾ ಅರ್ಜಿಗಳ ಸಂಖ್ಯೆಯೂ ಗಣನೀಯವಾಗಿ ಕುಸಿದಿದೆ ಎಂದು ಡೀನ್ಸ್ ಹೇಳಿದ್ದಾರೆ, ಎಚ್ -1 ಬಿ ವೀಸಾಗಳ ಸಂಖ್ಯೆ 2017 ರಲ್ಲಿ 2 ಲಕ್ಷ 36,000ಗಳಾಗಿತ್ತು. ಅವುಗಳ ಸಂಖ್ಯೆ 2018 ರಲ್ಲಿ ಲಕ್ಷದ 99 ಲಕ್ಷಕ್ಕೆ ಇಳಿದಿದೆ. ಟ್ರಂಪ್ ಸರ್ಕಾರದ ವಲಸೆ ವಿರೋಧಿ ನೀತಿ ತೀವ್ರ ಪರಿಣಾಮ ಬೀರಿದ್ದು, ವಿದೇಶಿ ವಲಸಿಗರಲ್ಲಿ ಭಯ ಹುಟ್ಟಿಸಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.