ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು
To build a wonderful life, there must be hardships on one side
ಲೋಕದರ್ಶನ ವರದಿ
ರಾಣೆಬೆನ್ನೂರ 27: ಅದ್ಭುತವಾದ ಬದುಕು ಕಟ್ಟಿಕೊಳ್ಳಲು ಒಂದು ಕಡೆ ಕಷ್ಟಗಳು ಇರಬೇಕು. ಇನ್ನೊಂದು ಕಡೆ ನಂಬಿಕೆಗಳು ಇರಬೇಕು. ಸುಖ ಮತ್ತು ಕಷ್ಟಗಳು ಯಾರನ್ನೂ ಬಿಟ್ಟಿಲ್ಲ. ಕಷ್ಟಗಳು ಜೀವನದಲ್ಲಿ ಪಾಠ ಕಲಿಸಿದರೆ ನಂಬಿಕೆಗಳು ಮನುಷ್ಯನಲ್ಲಿ ಶಕ್ತಿ ತುಂಬುತ್ತವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಗುರುವಾರ ತಾಲೂಕಿನ ಲಿಂಗದಹಳ್ಳಿ ಕ್ಷೇತ್ರದ ಡಾ. ವೀರಭದ್ರ ಶ್ರೀಗಳವರ ಅಂಗವಾಗಿ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಜೀವನದಲ್ಲಿ ಸ್ನೇಹಿತರನ್ನು ಕೂಡಬೇಕು.
ಶತ್ರುಗಳನ್ನು ಕಳೆಯಬೇಕು. ಸಂತೋಷವನ್ನು ಗುಣಿಸಬೇಕು. ದು:ಖವನ್ನು ಭಾಗಿಸಬೇಕು. ಇವು ಬಾಳಿನ ಭಾಗ್ಯೋದಯಕ್ಕೆ ಬೇಕಾದ ಅಮೂಲ್ಯ ಚಿಂತನಗಳು ಅವಶ್ಯವಾಗಿವೆ. ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರಾದರೆ, ಆ ಧರ್ಮ ವೃಕ್ಷದ ಹೂ ಹಣ್ಣು ಬಸವಾದಿ ಶರಣರು. ಶ್ರೀ ಜಗದ್ಗುರು ರೇಣುಕಾರ್ಯರ ಉಸಿರಿಲ್ಲದೇ ಬಸವಣ್ಣನವರ ಬೆವರಿಲ್ಲದೇ ವೀರಶೈವ ಧರ್ಮ ಪೂರ್ಣವಾಗದು. ಇವೆರಡರ ಸಮನ್ವಯ ಸದ್ಭಾವನೆಯಿಂದ ಬಾಳುವುದೇ ಎಲ್ಲರ ಗುರಿಯಾಗಬೇಕು. ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳವರ ಕ್ರಿಯಾಶೀಲ ಬದುಕು ಮಠದ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿದೆ. ಅವರ ಬಹು ದಿನಗಳ ಕನಸು ಇಂದು ನನಸಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಗಾಳಿಗೆ ಗಾಳ ಹಾಕುವುದಕ್ಕೆ ಮುಳ್ಳಿನ ಗಿಡಕ್ಕೆ ಬಟ್ಟೆ ಒಣ ಹಾಕಲು ಸಾಧ್ಯವಿಲ್ಲ. ಹಾಗೆಯೇ ಕೆಲವರಿಗೆ ಎಷ್ಟೇ ಒಳ್ಳೆಯದನ್ನು ಮಾಡಿದರೂ ಅವರಿಂದ ಕೆಟ್ಟವರು ಅನಿಸಿಕೊಳ್ಳುವುದು ತಪ್ಪುವುದಿಲ್ಲ. ಪ್ರಯತ್ನ ಹಣೆ ಬರಹಕ್ಕಿಂತ ದೊಡ್ಡದು. ಪ್ರಯತ್ನ ಎಂಬ ಪದ ಚಿಕ್ಕದಾದರೂ ಅದರ ಫಲಿತಾಂಶ ಅಮೋಘ ಅಪಾರ. ವೀರಶೈವ ಧರ್ಮದ ತತ್ವ ಸಿದ್ಧಾಂತಗಳು ಜೀವನ ವಿಕಾಸಕ್ಕೆ ಅಡಿಪಾಯವಾಗಿವೆ. ಶ್ರೀ ಜಗದ್ಗುರು ಪಂಚಾಚಾರ್ಯರು ಸಕಲ ಜಾತಿ ಜನಾಂಗಗಳಿಗೆ ಅಮೂಲ್ಯವಾದ ಆಧ್ಯಾತ್ಮ ಸಂದೇಶ ನೀಡಿದ್ದಾರೆ ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ವಸ್ತುವಿನ ಬೆಲೆ ಕೊಳ್ಳುವುದಕ್ಕೆ ಮುಂಚೆ ತಿಳಿದುಕೊಳ್ಳುತ್ತೇವೆ. ಮನುಷ್ಯನ ಬೆಲೆ ಕಳೆದುಕೊಂಡ ನಂತರ ತಿಳಿದುಕೊಳ್ಳುತ್ತೇವೆ. ಈಗಿನ ಕಾಲದಲ್ಲಿ ಸತ್ಯದ ಮಾತುಗಳು ಮುಳ್ಳುಗಳಾಗುತ್ತವೆ. ಬಣ್ಣದ ಮಾತುಗಳು ಮುತ್ತುಗಳಾಗುತ್ತವೆ.
ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಆತ್ಮ ಚಿಂತನೆ ನಡೆಸುತ್ತಾ ಪುಣ್ಯ ಸಂಪಾದಿಸಿಕೊಳ್ಳಬೇಕು. ಧರ್ಮದಿಂದ ಮನುಷ್ಯ ವಿಮುಖನಾದರೆ ಸರ್ವ ನಾಶ ಖಂಡಿತ. ವೀರಶೈವ ಧರ್ಮ ಸಂವಿಧಾನದಲ್ಲಿ ಜಾತಿ ಮತ ಪಂಥ ಮೀರಿ ಉಜ್ವಲ ಬದುಕಿಗೆ ಕೊಟ್ಟ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ. ಜಗ ಬೆಳಗಲು ಸೂರ್ಯ. ಬಾಳು ಬೆಳಗಲು ಗುರು ಬಹಳ ಮುಖ್ಯವೆಂದರು. ಸಾನ್ನಿಧ್ಯ ವಹಿಸಿದ ಶ್ರೀ ಕಾಶಿ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯ ಬಾಳಿ ಬದುಕಲು ನೀರು ಅನ್ನ ಗಾಳಿ ಬೇಕು. ಆದರ್ಶ ವ್ಯಕ್ತಿಯಾಗಿ ಬಾಳಲು ಪೂರ್ವಾಚಾರ್ಯರ ನುಡಿಗಳು ಬೇಕು. ದೇವರು ಮತ್ತು ಧರ್ಮವನ್ನು ಮರೆಯಬಾರದು. ನಾವು ಮಾಡಿದ ಉಪಕಾರ ಮತ್ತು ಪರರು ಮಾಡಿದ ಅಪಕಾರ ಮರೆತು ನಡೆದರೆ ಬಾಂಧವ್ಯಗಳು ಬೆಳೆಯುತ್ತವೆ. ಶ್ರೀ ಜಗದ್ಗುರು ಪಂಚಾಚಾರ್ಯರು ಸಮಾಜದ ಓರೆ ಕೋರೆಗಳನ್ನು ತಿದ್ದಿ ಬದುಕಿನ ವಿಕಾಸಕ್ಕೆ ಅಮೂಲ್ಯವಾದ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ ಕಾಶಿ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಧರ್ಮದ ಶಕ್ತಿ ಕಾನೂನಿಗಿಂತಲೂ ದೊಡ್ಡದು. ಧರ್ಮವನ್ನು ಅಧರ್ಮಕ್ಕೆ ಬಳಸಿಕೊಳ್ಳಬಾರದು. ಶಿಕ್ಷಣದಿಂದ ಮನುಷ್ಯನ ಬುದ್ಧಿ ಶಕ್ತಿ ಬೆಳೆದರೆ ಧರ್ಮದಿಂದ ಮನುಷ್ಯನ ಭಾವನೆಗಳು ಬೆಳೆಯುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನ ಸಂದೇಶದಲ್ಲಿ ಸಕಲರಿಗೂ ಒಳಿತನ್ನು ಉಂಟು ಮಾಡುವ ಸೂತ್ರಗಳನ್ನು ಬೋಧಿಸಿದ್ದಾರೆ ಎಂದರು. ನೇತೃತ್ವ ವಹಿಸಿದ ಲಿಂಗದಹಳ್ಳಿ ಹಿರೇಮಠದ ಡಾ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನದಿಯ ನೀರು ಎಷ್ಟು ತುಂಬಿದರೂ ಅದು ಖಾಲಿಯಾಗುವುದಿಲ್ಲ. ಹಾಗೆಯೇ ಧರ್ಮದ ಅರಿವನ್ನು ಎಷ್ಟು ಅರಿತರೂ ಪೂರ್ಣವಾಗುವುದಿಲ್ಲ. ಬಿಸಿಲು ಹೊತ್ತು ಮರ ನೆರಳು ನೀಡುತ್ತದೆ. ದೀಪ ತಾನು ಉರಿದು ಬೆಳಕು ಕೊಡುತ್ತದೆ. ಅದರಂತೆ ಮಹಾತ್ಮರು ತಾವು ನೋವು ಉಂಡು ನಮಗೆ ನಲಿವನ್ನು ಕೊಟ್ಟಿದ್ದಾರೆ.
ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಜೀವ ಸಂಕುಲದ ಶ್ರೇಯಸ್ಸಿಗೆ ದಾರೀದೀಪವಾಗಿವೆ. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಶುಭಾಗಮನ ಸಕಲರಿಗೂ ಶಾಂತಿ ನೆಮ್ಮದಿ ನೀಡಿ ಶ್ರೇಯಸ್ಸಿಗೆ ಕಾರಣವಾಗಲೆಂದರು. ಯಡೆಯೂರಿನ ರೇಣುಕಾ ಶಿವಾಚಾರ್ಯ ಸ್ವಾಮಿಗಳು, ಸಿಂದಗಿಯ ಡಾ. ಪ್ರಭು ಸಾರಂಗದೇವಸ್ವಾಮಿಗಳು, ಮುಕ್ತಿಮಂದಿರದ ವಿಮಲ ರೇಣುಕ ಸ್ವಾಮಿಗಳು, ಎಮ್ಮಿಗನೂರಿನ ವಾಮದೇವ ಮಹಾಂತ ಶ್ರೀಗಳು, ಶಿವಗಂಗಾದ ಡಾ ಮಲಯ ಶಾಂತಮುನಿ ಸ್ವಾಮಿಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು, ರಟ್ಟಿಹಳ್ಳಿಯ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹರಪನಹಳ್ಳಿಯ ವರ ಸದ್ಯೋಜಾತ ಸ್ವಾಮಿಗಳು, ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಗಣ್ಣಿಗೆಮಠದ ಚನ್ನವೀರ ದೇಶಿಕೇಂದ್ರ ಸ್ವಾಮಿಗಳು,
ಭದ್ರಾವತಿಯ ರಾಚೋಟೇಶ್ವರ ಸ್ವಾಮಿಗಳು, ಶಿವನಳ್ಳಿಯ ನಾಲ್ವಡಿ ಶಾಂತಲಿಂಗ ಸ್ವಾಮಿಗಳು, ಹೂಲಿಯ ಶಿವ ಸಿದ್ದರಾಮೇಶ್ವರ ಸ್ವಾಮಿಗಳು, ಮುಳವಾಡದ ಸಿದ್ದಲಿಂಗ ಶಿವಾಚಾರ್ಯರು, ಆಳವಂಡಿಯ ಮರುಳಾರಾಧ್ಯ ಸ್ವಾಮಿಗಳು, ನರೇಗಲ್ದದ ಮಲ್ಲಿಕಾರ್ಜುನ ಸ್ವಾಮಿಗಳು, ಮಣಕೂರಿನ ಮಲ್ಲಿಕಾರ್ಜುನ ಸ್ವಾಮಿಗಳು, ಕಂಕಳಿಯ ಸೋಮಶೇಖರ ಶ್ರೀಗಳು, ನರಸಾಪುರದ ಶಿವಕುಮಾರ್ ಶಿವಶರಣರು ಸೇರಿದಂತೆ ಮತ್ತಿತರರು ಸ್ವಾಮಿಗಳು, ಎಸ್ ಎಸ್ ರಾಮಲಿಂಗಣ್ಣನವರ , ವಿ ಎಸ್ ಹಿರೇಮಠ, ಗಂಗಾಧರ ಸ್ವಾಮಿ ಹಿರೇಮಠ, ಜುಂಜಪ್ಪ ಹೆಗ್ಗಪ್ಪನವರ, ಪ್ರಶಾಂತ ರಿಪ್ಪನ್‌ಪೇಟೆ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಇದ್ದರು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಆನಂತರ ಅನ್ನ ದಾಸೋಹ ಜರುಗಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 