ಶಿಕ್ಷಕರಿಗೂ ಮೂರು ದಿನಗಳ ‘ಪ್ರತಿಭಾ ಕಾರಂಜಿ’
Three-day ‘Pratibha Karanji’ for teachers too
ಬೆಳಗಾವಿ 08: ಶಿಕ್ಷಕರ ದಿನಾಚರಣೆಯನ್ನು ಮುಂದಿನ ವರ್ಷದಿಂದ ಮೂರು ದಿನಗಳ ವಿಶೇಷ ಕಾರ್ಯಕ್ರಮವಾಗಿ ಆಯೋಜಿಸಿ, ಶಿಕ್ಷಕರ ಪ್ರತಿಭೆ ಹಾಗೂ ಕ್ರೀಡಾಸಕ್ತಿಗೆ ವೇದಿಕೆ ಕಲ್ಪಿಸಲಾಗುವುದು ಎಂದು ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಘೋಷಿಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ನಡೆದ ಗ್ರಾಮೀಣ ಕ್ಷೇತ್ರದ ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಕ್ರೀಡಾಕೂಟಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಶಿಕ್ಷಕರು ಪ್ರತಿವರ್ಷ ಪ್ರತಿಭಾ ಕಾರಂಜಿ, ಕಲೋತ್ಸವ ಹಾಗೂ ಕ್ರೀಡಾಕೂಟಗಳನ್ನು ಆಯೋಜಿಸುತ್ತಾರೆ. ಇದೇ ರೀತಿಯಲ್ಲಿ ಶಿಕ್ಷಕರ ಪ್ರತಿಭೆಗೂ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದರು.
ಮುಂದಿನ ವರ್ಷದಿಂದ ಬೆಳಗಾವಿ ತಾಲೂಕು ಮಟ್ಟದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಶಿಕ್ಷಕರ ಹಬ್ಬ ಆಯೋಜಿಸಲಾಗುವುದು. ಮೊದಲ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯ, ಗಾಯನ, ರಂಗೋಲಿ, ನಾಟಕ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಎರಡನೇ ದಿನ ಕಬಡ್ಡಿ, ಕ್ರಿಕೆಟ್, ಖೋಖೋ, 100 ಮೀಟರ್ ಓಟ, ಹೈಜಂಪ್, ಲೆಮನ್ ಅಂಡ್ ಸ್ಪೂನ್ ಸೇರಿದಂತೆ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಮೂರನೇ ದಿನ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ ಹಾಗೂ ವಿಜೇತ ಶಿಕ್ಷಕರ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಶಿಕ್ಷಕರು ಕೇವಲ ಪಠ್ಯ ಬೋಧಕರಲ್ಲ; ಅವರು ಭವಿಷ್ಯದ ಪೀಳಿಗೆಯನ್ನು ರೂಪಿಸುವ ರಾಷ್ಟ್ರ ನಿರ್ಮಾತೃಗಳು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಪರಿಶ್ರಮವಿದೆ ಎಂದು ಹೆಬ್ಬಾಳಕರ್ ಹೇಳಿದರು.
ತಾವು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿದ್ದು, ಕನ್ನಡ ಶಾಲೆಯಲ್ಲಿ ಓದಿರುವ ಬಗ್ಗೆ ಹೆಮ್ಮೆ ಇದೆ ಎಂದ ಅವರು, ಶಿಕ್ಷಣದ ಜತೆಗೆ ಜೀವನವನ್ನು ಎದುರಿಸುವುದು ಹಾಗೂ ಯಶಸ್ಸು ಸಾಧಿಸುವ ಮಾರ್ಗವನ್ನೂ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕೆ ಶಿಕ್ಷಕರಲ್ಲಿ ಕ್ಷಮೆಯಾಚಿಸಿದ ಅವರು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮಗಳಿಂದಾಗಿ ತಡವಾಯಿತು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ವೃಷಭೇಂದ್ರಯ್ಯ ಜೆ.ಡಿ., ಬಸವರಾಜ ರಾಯವ್ವಗೋಳ, ಜಂಗಲಿ ಸಾಬ್ ನಾಯಕ, ಜಯಕುಮಾರ್ ಹೆಬ್ಳಿ, ಆರ್.ಕೆ. ಆಂಜನೇಯ, ಯು.ಡಿ. ಹುನಕುಪ್ಪಿ, ಪುಂಡಲೀಕ್ ಚವ್ಹಾಣ, ಅನ್ವರ್ ಲಂಗೋಟಿ, ರಮೇಶ ಗೋಣಿ, ಆನಂದ ಕಾದ್ರೊಳ್ಳಿ, ಅಶೋಕ ಖೋತ ಹಾಗೂ ಚಂದ್ರು ಕೋಲಕಾರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 