ಶಾನವಾಸಪುರದಲ್ಲಿ ಗ್ರಾಮೀಣ ಕಲೋತ್ಸವ ಹಿ2026 ಜನಪದ ಕಲೆಯ ರಂಗಿನಲ್ಲಿ ತೇಲಿದ ಸಾವಿರಾರು ಜನರು

ಶಾನವಾಸಪುರದಲ್ಲಿ ಗ್ರಾಮೀಣ ಕಲೋತ್ಸವ ಹಿ2026 ಜನಪದ  ಕಲೆಯ ರಂಗಿನಲ್ಲಿ ತೇಲಿದ ಸಾವಿರಾರು ಜನರು Thousands of people immersed in the folk art scene at the Rural Kalotsava Hi2026 in Shanavaspur

ಬಳ್ಳಾರಿ 21: ಸಿರುಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ನಡೆದ “ಗ್ರಾಮೀಣ  ಕಲೋತ್ಸವ 2026'' ಕಾರ್ಯಕ್ರಮ ಜನತೆಯ ಮನಸೂರೆಗೊಂಡಿತು. ನೇತ್ರ ಕಲಾ ಸಂಘ, ಸಿರುಗುಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ಈ ಸಾಂಸ್ಕೃತಿಕ ಸಂಭ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿ ಜನಪದ ಕಲೆಯ ಸೊಬಗನ್ನು ಕಣ್ತುಂಬಿಕೊಂಡರು. ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳ್ಳಾರಿ ಸಹಾಯಕ ನಿರ್ದೇಶಕ ಬಿ. ನಾಗರಾಜ್ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಲಾಸಂಘ-ಸಂಸ್ಥೆಗಳಿಗೆ ಪ್ರತಿವರ್ಷ ಧನಸಹಾಯ ನೀಡುವ ಮೂಲಕ ಗ್ರಾಮೀಣ ಭಾಗದ ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ನೇತ್ರ ಕಲಾ ಸಂಘವು ಕಳೆದ 15 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಬೀದಿ ನಾಟಕ, ಆರೋಗ್ಯ ಜಾಗೃತಿ, ಬಾಲ್ಯ ವಿವಾಹ ತಡೆ, ಅಸ್ಪೃಶ್ಯತೆ ನಿವಾರಣೆ ಸೇರಿದಂತೆ ಹಲವು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಶಾನವಾಸಪುರ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಲ್ಲಿಕಾರ್ಜುನ ವಹಿಸಿದ್ದರು. ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿಕ ಜಾಗೃತಿ ಮೂಡಿಸುವುದರ ಜೊತೆಗೆ ಯುವಕರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸಲು ಸಾಧ್ಯವಾಗುತ್ತದೆ ಎಂದರು.

ಇಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಜನಪದ ಕಲೆಗಳು ನಿಧಾನವಾಗಿ ನಶಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳು ಒಟ್ಟಾಗಿ ಜನಪದ ಕಲೆಗಳನ್ನು ಉಳಿಸಿ ಬೆಳೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸವಾಗಿದೆ. ಯುವಪೀಳಿಗೆಯವರು ಕ್ರೀಡೆ, ಶಿಕ್ಷಣ, ಕೃಷಿ, ಆಧ್ಯಾತ್ಮ, ಜನಪದ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಗ್ರಾಮೀಣ ಸೊಗಡು ಉಳಿಯಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ್, ಹಿರಿಯ ಮುಖಂಡರಾದ ಎಂ. ಈರ​‍್ಪ, ವೈ. ನಾಗರಾಜ್, ಸೋಮಪ್ಪ, ರಾಮಪ್ಪ, ಅಕ್ಬರ್ ಸಾಬ್, ತಿಪ್ಪೇರುದ್ರಗೌಡ, ಅಯ್ಯಪ್ಪ, ಬೈಲೂರು ನಾಗರಾಜ್ ಹಾಗೂ ಬೈಲಾಟ ಅಕಾಡೆಮಿ ಮಾಜಿ ಸದಸ್ಯ ಹೆಚ್‌. ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ರಂಜಿಸಿದವು. ಡಿ. ಮಹದೇವಿ ಸಿರುಗುಪ್ಪ ತಂಡದಿಂದ ಸುಗಮ ಸಂಗೀತ, ಮುತ್ತಣ್ಣ ಕುಡುದ್ರಾಳ್ ತಂಡದಿಂದ ಜನಪದ ಸಂಗೀತ, ದೊಡ್ಡ ಹುಸೇನಪ್ಪ ಅರಳಿಗನೂರು ತಂಡದಿಂದ ವಚನ ಸಂಗೀತ, ಹರಿಕೃಷ್ಣ ಸಂಗನಕಲ್ಲು ತಂಡದಿಂದ ಡೊಳ್ಳು ಕುಣಿತ, ದಾಸರ ಶಕ್ಷವಲಿ ಜಾಲಿಬೆಂಚಿ ತಂಡದಿಂದ ತತ್ವಪದ ಗಾಯನ ಹಾಗೂ ಸುಮಿತ್ರ ಮಾನ್ವಿ ತಂಡದಿಂದ “ಶ್ರೀಕೃಷ್ಣ ಸಂಧಾನ” ಪೌರಾಣಿಕ ನಗೆನಾಟಕ ಪ್ರದರ್ಶನಗೊಂಡು ಸಾವಿರಾರು ಜನರನ್ನು ನಗೆಯಲಿ ತೇಲಿಸಿತು.ಮರಿಯಮ್ಮನಹಳ್ಳಿಯ ಜನಪದ ಕಲಾವಿದ ಹನುಮಯ್ಯ ಅವರ ಕಂಠದಲ್ಲಿ ಮೂಡಿಬಂದ ಮಹರ್ಷಿ ವಾಲ್ಮೀಕಿ ಗೀತೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದು, ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.ನೇತ್ರ ಕಲಾ ಸಂಘದ ಕಾರ್ಯದರ್ಶಿ ವೀರೇಶ್ ದಳವಾಯಿ ಕಾರ್ಯಕ್ರಮದ ನಿರ್ವಹಣೆ ಹಾಗೂ ನಿರೂಪಣೆ ಮಾಡಿದರು.