ಕಷ್ಟ ಸುಖ ಒಂದು ನಾಣ್ಯರ ಎರಡು ಮುಖ. ಅದರಲ್ಲೂ ವಯಕ್ತಿಕ ಕಷ್ಟಕ್ಕಿಂತ ಸಾಮಾಜಿಕವಾಗಿ ಬಂದೊದಗುವ ಕಷ್ಟ ಬಹಳವೇ ದೊಡ್ಡದು. ಬರಗಾಲ, ಪ್ರವಾಹ, ಅತೀವೃಷ್ಟಿ, ಹಿಮಪಾತ, ಭೂಕಂಪನ ಹೀಗೆನಾದರೂ ನಾವಿದ್ದ ಪ್ರದೇಶದಲ್ಲಿ ಸಂಭವಿಸಿ ಬಿಟ್ಟರೆ ಬದುಕು ಮೂರಾಬಟ್ಟೆಯಾಗಿ ಹೆಸರಿಲ್ಲದಂತೆ ನಶಿಸಿ ಹೋಗಬಹುದು. ಕುಡಿಯುವ ನೀರು, ಮಲಗಲು ಜಾಗ, ಒಂದೊಪ್ಪತ್ತಿನ ಊಟ ಎಲ್ಲವಕ್ಕೂ ಈ ಭೂಮಿಯನ್ನೇ ಆಶ್ರಯಿಸಿರುವ ಜೀವಿಗಳಿಗೆ ಜೀವ ಉಳಿಸಿಕೊಳ್ಳಬೇಕಾದ ಸಂದರ್ಭ ಬಂದಾಗ ಎತ್ತ ಓಡಬೇಕು ಎಂದು ತಿಳಿಯುವುದಿಲ್ಲ. ಆದರೆ ಅದೆಷ್ಟೋ ಜನ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತನಗೊಬ್ಬನಿಗೆ ಬಂದಿರುವ ದೊಡ್ಡ ಸಮಸ್ಯೆ ಎಂದು ಬಿಂಬಿಸಿಕೊಳ್ಳುತ್ತಾರೆ. ವಿಚಾರ ಮಾಡಿದರೆ ಪ್ರಕೃತಿ ಕೊಡುವ ಹೊಡೆತಕ್ಕಿಂತ ಉಳಿದ ಎಲ್ಲ ಸಮಸ್ಯೆಗಳು ಸಣ್ಣದು ಅನ್ನಿಸುತ್ತದೆ. ಒಲೆ ಹೊತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದರೆ ನಿಲಲುಬಾರದು ಎನ್ನುವ ದಾಸವಾಣಿಯಂತೆ ನಮ್ಮ ಸಣ್ಣ ಪುಟ್ಟ ಸಮಸ್ಯೆಗಳನ್ನು ಬೆಳೆಸಿಕೊಳ್ಳುವುದು ಬಿಟ್ಟರೆ ಅಂಥಹ ಹಾನಿ ಏನು ಆಗುವುದಿಲ್ಲ. ಅದನ್ನು ತಡೆದುಕೊಳ್ಳಬಹುದು. ಆದರೆ ಪ್ರಕೃತಿಯಿಂದ ಬರುವ ಹೊಡೆತಗಳಿಗೆ ನಿಲ್ಲುವುದು ಬಹಳವೇ ಕಷ್ಟವಾಗಿಬಿಡುತ್ತದೆ.
ದೇವಭೂಮಿ ಎಂದೆ ಕರೆಯುವ ಉತ್ತರಖಾಂಡದ ಒಂದು ಪುಟ್ಟ ಹಳ್ಳಿ. ಆ ಹಳ್ಳಿ ಹೃಷಿಕೇಶಕ್ಕೆ ಹೋಗುವಾಗ ಸಿಗುತ್ತದೆ. ನಾಲ್ಕಾರು ಮನೆಗಳಿರುವ ಆ ಹಳ್ಳಿಗೆ ಪ್ರವಾಸಿಗರೇ ಆಸರೆ. ಮೂರು ನಾಲ್ಕು ಎಮ್ಮೆಗಳನ್ನು ಸಾಕಿಕೊಂಡು, ಮನೆಯ ಮುಂದಿನ ಪುಟ್ಟ ಜಾಗದಲ್ಲಿಯೇ ಚಹಾದ ಅಂಗಡಿ ಇಟ್ಟುಕೊಂಡು ಬರುವ ಪ್ರವಾಸಿಗರಿಗೆ ಬಿಸಿಯಾದ ಚಹಾದ ಜೊತೆ ಪರೋಟಾವನ್ನು ಸುಟ್ಟುಕೊಡುತ್ತ ಬಂದ ಕಾಸಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಜನ. ಆ ಮನೆಗಳೋ ಗಟ್ಟಿಯಾದ ಗಾಳಿ ಬೀಸಿದರೆ ಹಾರಿಯೇ ಹೋಗುವದೇನೋ ಅನ್ನಿಸಯವಂತದ್ದು. ಅವರನ್ನು ಕೇಳಿದರೆ ಎರಡು ಕಡೆ ಗುಡ್ಡ ಅಡ್ಡವಾಗಿ ನಿಲ್ಲುವುದರಿಂದ ಇಷ್ಟರವರೆಗೂ ನಮಗೆ ಗಾಳಿ, ಮಳೆಯಿಂದ ಹಾನಿಯಾಗಿಲ್ಲ. ಇಲ್ಲಿ ಆರೋಗ್ಯ ಕೆಟ್ಟರೆ ಸಮಸ್ಯೆ ಆಗುತ್ತದೆ. ನಲವತ್ತು ಕಿಲೋಮೀಟರ್ ದೂರದ ಆಸ್ಪತ್ರೆಗೆ ಹೋಗುವುದು ಕಷ್ಟ. ರಾತ್ರಿ ಹೊತ್ತು ವಾಹನ ಕೂಡ ಹೋಗುವುದಿಲ್ಲ ಎಂದಿದ್ದರು. ಗುಡ್ಡಗಾಡಿನ ಪ್ರದೇಶ, ಗುಡ್ಡದ ಮರುಕಲಿಗೆ ಚಾಚಿಕೊಂಡಿರುವ ರಸ್ತೆ. ಜೀಪು ಕಾರಿನ ಚಕ್ರ ನಾಲ್ಕಿಂಚು ಸರಿದರೆ ಪ್ರಪಾತಕ್ಕೆ ಸೇರುವ ಭಯ. ಅಂತಹ ರಸ್ತೆಯಲ್ಲಿ ಯಾವಾಗ ಬೇಕಾದರೂ ಮಳೆಯಾಗಿ ಗುಡ್ಡ ಕುಸಿದು ಹೋಗಬಹುದು. ರಸ್ತೆ ಬಂದ್ ಆಗಬಹುದು. ಆ ಹಳ್ಳಿಯಿಂದ ದೊಡ್ಡ ಊರಿನ ಸಂಪರ್ಕವೇ ನಿಂತು ಹೋಗಬಹುದು. ಅಂತಹ ಜಾಗವದು. ಅಷ್ಟೆ ಅಲ್ಲ ಅವರು ಕೊಡುವ ಪರೋಟಾಕ್ಕೆ ಹಿಟ್ಟು, ತರಕಾರಿಯನ್ನು ಸಹ ದೂರದ ಊರಿನಿಂದಲೇ ತರಬೇಕು. ಇಂಥ ಕಷ್ಟಕರವಾದ ಬದುಕು ಕರ್ನಾಟಕದ ಯಾವ ಹಳ್ಳಿಯಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ ಅಂದುಕೊಳ್ಳುತ್ತೇನೆ. ಅನಿಶ್ಚಿತತೆಯ ಬದುಕಿಗೆ ಅವರೆಲ್ಲ ಒಗ್ಗಿಕೊಂಡಿದ್ದಾರೆ. ಒಂದು ಹೊತ್ತಿನ ಊಟ ಇಲ್ಲದೆಯೂ ಕಾಲ ಕಳೆಯುವ ಕಲೆ ಕಲಿತಿದ್ದಾರೆ. ಉತ್ತರಕಾಂಡದ ಬಹುತೇಕ ಪ್ರದೇಶದಲ್ಲಿ ವಾಸಿಸುವ ಜನರೆಲ್ಲ ಹೀಗೆ ಬದುಕುವುದು. ಕುದುರೆಗಳು ಇದ್ದವನು ಶ್ರೀಮಂತ. ಕುದುರೆ ಲೆಕ್ಕದಲ್ಲಿ ಅವನ ಶ್ರೀಮಂತಿಕೆ ಅಳೆಯಲಾಗುತ್ತದೆ. ಇತ್ತಿತ್ತಲಾಗೆ ಹೊಟೇಲ್ ಉದ್ಯಮ ಚೆನ್ನಾಗಿ ನಡೆಯುತ್ತಿರುವುದರಿಂದ ಸ್ವಲ್ಪ ಸುಧಾರಿಸಿಕೊಂಡಿದ್ದಾರೆ. ಆದರೂ ಅವರ ಈ ಎಲ್ಲ ಉದ್ಯಮ ನಡೆಯುವುದು ಕೇವಲ ಆರು ತಿಂಗಳು ಬರುವ ಪ್ರವಾಸಿಗರನ್ನು ನೆಚ್ಚಿಕೊಂಡು. ಮಳೆಗಾಲ ಚಳಿಗಾಲ ಬಂತೆಂದರೆ ಎಲ್ಲ ಈತಿಯ ವ್ಯವಹಾರಗಳು ಬಂದ್ ಆಗಿಬಿಡುತ್ತವೆ.
ಇಂಥಹ ಸ್ಥಿತಿಯಲ್ಲಿಗೆ ಹುಟ್ಟಿ ಬೆಳೆದು ಆ ಪುಟ್ಟ ಹಳ್ಳಿಗೆ ಮದುವೆಯಾಗಿ ಬಂದವಳು ಸುಮಿತ್ರಾಬಾಯಿ. ಮೂರು ಮಕ್ಕಳ ತಾಯಿ. ಅತ್ತೆ ಮಾವ, ಮೂರು ಮಕ್ಕಳನ್ನು ನೋಡಿಕೊಳ್ಳುತ್ತ ಹೊಟೇಲ್ ಕೆಲಸ ನಿಭಾಯಿಸಬೇಕು. ಮಾವ ಹಾಸಿಗೆ ಹಿಡಿದು ಹತ್ತು ವರ್ಷವಾಗಿದೆ. ಗಂಡನ ಕಾಲು ಮುರಿದು ಓಡಾಡಲಾಗದೆ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಸಹಾಯಕ್ಕೆ ಅತ್ತೆಯೊಬ್ಬಳು ಸಿಗುತ್ತಾಳೆ. ಇಡೀ ಮನೆಯ ಜವಬ್ದಾರಿ ಆ ಹೆಣ್ಣೆಂಗಸಿನ ಮೇಲೆ. ಆದರೆ ಆಕೆ ಇದನ್ನು ಕಷ್ಟ ಎಂದು ಕೂರಲಿಲ್ಲ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊಟೇಲ್ ಕೆಲಸದ ಜೊತೆ ಸಾಕಿದ್ದ ಎರಡು ಎಮ್ಮೆ ಉಪಚಾರ ಮಾಡಿ ಹಾಲು ಮಾರಿ ಮೂರು ಹೊತ್ತಿನ ಗಂಜಿ ಸಂಪಾದಿಸುತ್ತಿದ್ದಳು. ಅವಳು ಹಾಗೆ ಕಷ್ಟಪಡುವಾಗಲೇ ನಾವು ಅವಳ ಹೋಟೆಲ್‌ನ ಪರೋಟ ತಿಂದು ಬಿಸಿಚಹಾ ಕುಡಿದು ಎದ್ದು ಹೋಗಿದ್ದವೆವು. ಆದರೆ ಕಳೆದ ಮಳೆಗಾಲ ಆಕೆಯ ಮನೆಯನ್ನು ಮನೆಯ ಜನರನ್ನು ಕಣ್ಣಿಗೆ ಕಾಣಿಸದಷ್ಟು ದೂರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿತ್ತು. ಈಕೆ ಮಳೆ ಜೋರಾಗಿದೆ ಎಂದು ತನ್ನ ಎಮ್ಮೆಗಳನ್ನು ನೋಡಲು ದೊಡ್ಡ ಮಗನನ್ನು ಕರೆದುಕೊಂಡು ಹೋಗಿದ್ದಳು. ರಭಸದಲ್ಲಿ ಬೀಸಿದ ಗಾಳಿ ಮಳೆಗೆ ನೋಡುನೋಡುತ್ತಿದ್ದಂತೆ ಮನೆ, ಮನೆಯ ವಸ್ತುಗಳೆಲ್ಲ ಹಾರಿ ಹೋಗಿದ್ದವು. ಇತ್ತ ಈಕೆಯನ್ನೆ ಹಾಸಿಕೊಂಡು ಹೋಗುವ ಗಾಳಿ. ಮನೆಯತ್ತ ಓಡಲಾಗದೆ ಮಗನನ್ನು ತಬ್ಬಿಕೊಂಡು ಹತ್ತಿರದಲ್ಲಿದ್ದ ಮರವೊಂದನ್ನು ಹಿಡಿದು ಕುಳಿತುಬಿಟ್ಟಿದ್ದಳು. ಅನೀರೀಕ್ಷಿತ ಮಳೆಗಾಳಿಗೆ ಮನೆಯೊಳಗಿದ್ದವರೆಲ್ಲ ಹೆದರಿ ಕಂಗಾಲಾದರು. ಮಳೆ ನಿಂತಾಗ ಕಿರಿಯ ಮಗ ಮತ್ತು ಗಂಡ ಮಾತ್ರ ಬದುಕುಳಿದಿದ್ದರು. ಮಧ್ಯದ ಮಗ ಅತ್ತೆ ಮಾವ ಮೂವರು ಅಸುನೀಗಿದ್ದರು. ಒಂದುಕಡೆ ಮನೆಯ ಜನರನ್ನು, ಕರುಳ ಬಳ್ಳಿಯನ್ನು ಕಳೆದುಕೊಂಡ ನೋವು. ಇನ್ನೊಂದು ಕಡೆ ಉಳಿಯಲು ಸಹ ಮನೆಯಿಲ್ಲ.. ಬಟ್ಟೆಬರೆಯಿಲ್ಲ. ಹೊಟ್ಟೆಗಿಲ್ಲ. ಮಳೆಗಾಲದಲ್ಲಿ ಅತ್ತ ಯಾರೂ ಬರುವುದೂ ಇಲ್ಲ. ಮಳೆಗಾಲ ನಿಲ್ಲುವವರೆಗೆ ಅಲ್ಲಿದ್ದವರ ಸಹಾಯದಲ್ಲಿಯೇ ಜೀವನ ಸಾಗಿಸಬೇಕಾಗಿ ಬಂದಿತ್ತು. ಉಟ್ಟ ಉಡುಗೆಯಲ್ಲಿ ಬೀದಿಗೆ ಬಿದ್ದಿದ್ದರು. ಮತ್ತೆ ಚೇತರಿಸಿಕೊಳ್ಳಲು ಸುಲಭಕ್ಕೆ ಸಾಧ್ಯವಿರಲಿಲ್ಲ. ಆದರೆ ಆಕೆ ಜೀವನ ನಡೆಸಲು ಹೆದರಿ ಸಾಯಲಿಲ್ಲ. ಈಗ ಮತ್ತೆ ಮನೆ ಕಟ್ಟಲು ತಯಾರಿ ನಡೆಸುತ್ತಿದ್ದಾಳೆ.
ಬೇಸಿಗೆ ಬಂತೆಂದರೆ ಇನ್ನೊಂದು ಪ್ರದೇಶದವರಿಗೆ ಭಯ ಶುರುವಾಗುತ್ತದೆ. ರಾಜಸ್ಥಾನದ ಮರಳುಗಾಡಿಗೆ ಹತ್ತಿರ ಇರುವ ಪ್ರದೇಶದಲ್ಲಂತು ನೀರಿಗೆ ಇರುವಷ್ಟು ಬೆಲೆ ಚಿನ್ನಕ್ಕೂ ಇರುವುದಿಲ್ಲ. ಅಲ್ಲಿಯ ದನಕರು, ಮನುಷ್ಯರಿಗೆ ಊರಲ್ಲಿ ನೀರು ಸಿಗದೇ ಬೇರೆಡೆಯಿಂದ ತಂದು ಪೂರೈಸಬೇಕಾಗುತ್ತದೆ. ಕೆಲವು ದಿನಗಳ ಹಿಂದೆ ನನ್ನ ಮಿಲಿಟರಿ ಕೆಲಸದಲ್ಲಿರುವ ಸ್ನೇಹಿತರೊಬ್ಬರಿಗೆ ಕುಶಲೋಪರಿ ಮಾತಿಗೆ ಪೋನ್ ಮಾಡಿದಾಗ ಅವರು ಹೇಳಿದರು. ನಾನಿರುವ ಸ್ಥಳದಲ್ಲಿ ಇನ್ನು ನೀರಿಗೆ ತೊಂದರೆ ಆಗುತ್ತೆ. ನಮ್ಮ ಡ್ಯೂಟಿ ಅನ್ನುವದು ಇಪ್ಪತ್ನಾಲ್ಕು ಗಂಟೆ ಆದರೂ ಸಹ ಬಿಡುವಿನ ಸಮಯ ನೋಡಿಕೊಂಡು ಟ್ಯಾಂಕರ್ ಮೂಲಕ ನೀರು ತರಿಸಿ ಇಲ್ಲಿನ ಹಸುಗಳಿಗೆ ಒಂಟೆಗಳಿಗೆ ನೀರು ಕುಡಿಸುವ ವ್ಯವಸ್ಥೆ ಮಾಡುತ್ತೇವೆ ಎಂದು. ಮನುಷ್ಯರಿಗಾದರೆ ಟ್ಯಾಂಕರ್ ನೀರು ತರಿಸಿಕೊಂಡು ಉಪಯೋಗಿಸ್ತಾರೆ. ಬೀದಿಲಿ ಮಲಗುವ ನಾಯಿ, ದನ ಒಂಟೆಗಳಿಗೆ ಆಹಾರದ ಜೊತೆ ನೀರು ಇಲ್ಲವೆಂದರೆ ಬದುಕುವುದು ಕಷ್ಟ. ಹಾಗಾಗಿ ನಮ್ಮ ಸ್ವಂತ ಖರ್ಚಿನಿಂದ ಸಾಧ್ಯವದಷ್ಟು ಈ ರೀತಿಯ ಕೆಲಸ ಮಾಡುತ್ತೇವೆ. ನಮ್ಮ ಹೊಲದಲ್ಲಿ ದುಡಿಯುವ ಎತ್ತುಗಳು ಬೇರೆ ಅಲ್ಲ. ಇವು ಬೇರೆ ಅಲ್ಲ ಅನ್ನಿಸುತ್ತದೆ ಎಂದರು.
ಅಂದರೆ ಪ್ರತೀ ಹಂತಕ್ಕೂ ಕಷ್ಟವೊಂದು ಇದ್ದೆ ಇದೆ. ಆ ಕಷ್ಟವನ್ನು ಎದುರಿಸುವ ಶಕ್ತಿ ಮಾತ್ರ ನಮ್ಮದು. ಆಫೀಸಿನಲ್ಲಿ ಬೈದರು ಎಂದು, ಮನೆಯಲ್ಲಿ ಗಂಡ ಒಂದೇಟು ಹೊಡೆದ ಎಂದು, ಮಕ್ಕಳು ಶಾಲೆಯಲ್ಲಿ ಜಾಣರಿಲ್ಲ ಎಂದು, ಅತ್ತೆ ಮಾವನೊಟ್ಟಿಗೆ ಇರಲಾಗದು ಎಂದು, ಮದುವೆಯಾದ ಹೆಂಡತಿ ಸರಿ ಇಲ್ಲ ಎಂದು, ಗೆಳೆಯ ಏನೋ ಅಂದ ಎನ್ನುತ್ತ, ಪರೀಕ್ಷೆಯಲ್ಲಿ ಫೇಲಾದೆ ಎನ್ನುತ್ತ ಅನಾಹುತದ ದಾರಿ ಹಿಡಿಯುವುದು ಕಂಡಾಗಲೆಲ್ಲ ಪ್ರಕೃತಿ ಕೊಡುವ ಕಷ್ಟಕ್ಕಿಂತ ಇವುಗಳು ಹೇಗೆ ದೊಡ್ಡದಾದವು ಅನ್ನಿಸುತ್ತದೆ. ಜನ ಎರಡು ದಿನ ಮಾತಾಡಿ ತಣ್ಣಗಾಗುತ್ತಾರೆ. ನಮ್ಮ ಸಮಸ್ಯೆಗೆ ಅವರಾ್ಯರು ಪರಿಹಾರ ಕೊಡುವುದಿಲ್ಲ. ಹಾಗಿರುವಾಗ ನಮ್ಮ ಸಮಸ್ಯೆ ದೊಡ್ಡದು ಎಂದು ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಬದುಕಲು ಸಾಧ್ಯವೇ ಇಲ್ಲ ಎಂದರೂ ಹೋರಾಟ ಮಾಡಿ ಬದುಕುವ ಜನರತ್ತ ಒಮ್ಮೆ ನೋಡಿದರೆ ನಮ್ಮ ನಿರ್ಧಾರ ಬದಲಾಗುವುದು. ಬದುಕಿದ್ದರೆ ಸುಖವು ಸಿಗಬಹುದು.
- * * * -