ಪೃಥ್ವಿ ಶಾಮನೂರು 'ಹೃದಯಂ' ಚಿತ್ರಕ್ಕೆ ಚಾಲನೆ

ಪೃಥ್ವಿ ಶಾಮನೂರು 'ಹೃದಯಂ' ಚಿತ್ರಕ್ಕೆ ಚಾಲನೆ  This is a college love story from 20 years ago

ಇದು 20 ವರ್ಷಗಳ ಹಿಂದಿನ ಕಾಲೇಜ್ ಲವ್ ಸ್ಟೋರಿ  

'ಪದವಿಪೂರ್ವ', 'ಉಡಾಳ' ಖ್ಯಾತಿಯ ನಟ ಪೃಥ್ವಿ ಶಾಮನೂರು ಇದೀಗ ಮತ್ತೊಂದು ಯೂಥ್‌ಫುಲ್ ಲವ್ ಸ್ಟೋರಿ ಮೂಲಕ ತೆರೆಮೇಲೆ ಬರುವ ಸಿದ್ದತೆ ನಡೆಸಿದ್ದಾರೆ. ಆ ಚಿತ್ರದ ಹೆಸರು 'ಹೃದಯಂ'. ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ತೊಡಗಿಕೊಂಡಿರುವ ರಜತ್ ಸೂರ್ಯವಂಶಿ ಈ ಚಿತ್ರದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಮೊದಲಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ಪ್ರಣಿತ್ ಪಿಕ್ಚರ್ಸ್‌ ಪ್ರೊಡಕ್ಷನ್ಸ್‌ ಮೂಲಕ ಶ್ರೀದೇವಿ ಎಲ್‌.ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಹೃದಯಂ' ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕ ಯೋಗರಾಜ ಭಟ್, ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಚಿತ್ರಕ್ಕೆ ಶುಭ ಹಾರೈಸಿದರು.  

ಮುಹೂರ್ತದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಜತ್ ಸೂರ್ಯವಂಶಿ 'ಕಳೆದ 12 ವರ್ಷಗಳಿಂದ ನಾನು ನಂದಕಿಶೋರ್ ಜತೆ 'ವಿಕ್ಟರಿ', 'ಅಧ್ಯಕ್ಷ' ಮೊದಲಾದ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಇದೊಂದು ಫೀಲ್ ಗುಡ್ ಲವ್ ಸ್ಟೋರಿ. ನೈಜ ಘಟನೆಯೊಂದನ್ನಾಧರಿಸಿ, 2000-2006ರ ಸಮಯದಲ್ಲಿ ನಡೆಯುವ ಕಾಲೇಜ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಆ ಕಾಲದಲ್ಲಿ 22-23ರ ವಯಸಿನ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ, ಪ್ರೇಮದ ಪ್ರಕರಣಗಳು ಹೇಗೆಲ್ಲಾ ನಡೆಯುತ್ತಿತ್ತು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ. ಮಾರ್ಚ್‌ ಮೊದಲ ವಾರದಿಂದ ಆರಂಭಿಸಿ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಚೇತನ್ ದಾವ್ಯ ಮ್ಯೂಸಿಕ್ ಮಾಡುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಆರಾಧನಾ ಭಟ್, ನಾಯಕಿಯ ತಂದೆಯಾಗಿ ರಮೇಶ್ ಇಂದಿರಾ, ನಾಯಕನ ತಂದೆ, ತಾಯಿಯಾಗಿ ರವಿಭಟ್, ಸ್ವಾತಿ ಅಲ್ಲದೆ ಸ್ನೇಹಿತನಾಗಿ ಸೂರಜ್(ಕಾಮಿಡಿ ಕಿಲಾಡಿಗಳು) ನಟಿಸುತ್ತಿದ್ದಾರೆ' ಎಂದು ವಿವರಿಸಿದರು. 

ಚಿತ್ರದ ನಾಯಕ ಪೃಥ್ವಿ ಶಾಮನೂರು ಮಾತನಾಡಿ 'ಪದವಿ ಪೂರ್ವದಿಂದ ಆರಂಭಿಸಿ, ಇದು ನಾನು ನಟಿಸುತ್ತಿರುವ ನಾಲ್ಕನೇ ಚಿತ್ರ. ಅದೊಂದು ಟೀನೇಜ್ ಲವ್ ಸ್ಟೋರಿ ಆಗಿತ್ತು. ಇದು 2006ರಲ್ಲಿ ನಡೆಯುವ ಅಪ್ಪಟ ಪ್ರೇಮಕಥೆ. ಸ್ಟೋರಿ ತುಂಬಾ ಚೆನ್ನಾಗಿದೆ. ಒಬ್ಬ ಕಾಲೇಜ್ ಹುಡುಗನಾಗಿ ನಾನೀ ಚಿತ್ರದಲ್ಲಿ ನಟಿಸುತ್ತಿದ್ದೇನೆ' ಎಂದರು. ನಂತರ ನಾಯಕಿ ಆರಾಧನಾ ಭಟ್ ಮಾತನಾಡಿ 'ಕಿರುತೆರೆಯ ಮಹಾನಟಿಯಲ್ಲಿ ಭಾಗವಹಿಸಿದ್ದೆ. ಇದು ನನ್ನ 2ನೇ ಚಿತ್ರ. ಕಥೆ ಕೇಳಿ ತುಂಬಾ ಖುಷಿಯಾಯ್ತು. ನನ್ನದು ಕಾಲೇಜ್ ಹುಡುಗಿಯ ಪಾತ್ರ, ಮೂರು ಶೇಡ್ಸ್‌ ಇದೆ' ಎಂದರು. ಚಿತ್ರದ ನಿರ್ಮಾಪಕಿ ಶ್ರೀದೇವಿ ಎಲ್‌.ಕೆ. ಮಾತನಾಡುತ್ತ 'ನಿರ್ದೇಶಕರು ಮಾಡಿಕೊಂಡಿರುವ ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ ನಾವೀ ಚಿತ್ರ ನಿರ್ಮಾಣಕ್ಕೆ ಮುಂದಾದೆವು' ಎಂದರು. ಸಾಗರ್ ಅವರ ಛಾಯಾಗ್ರಹಣ, ರಜತ್, ಉಪೇಂದ್ರ, ಮನೋಜ್ ಅವರ ಸಂಭಾಷಣೆ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ. 


Film