ಬೆಂಗಳೂರು, ಏ.13, ಕೊರೋನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಏಪ್ರಿಲ್ 14ರವರೆಗೆ ಜಾರಿ ಮಾಡಿರುವ ದೇಶಾದ್ಯಂತ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲು ನಿರ್ಧರಿಸಲಾಗಿದ್ದು, ಮುಂದಿನ ಲಾಕ್‌ಡೌನ್ ಸ್ಮಾರ್ಟ್ ಲಾಕ್‌ಡೌನ್ ಮಾದರಿಯಲ್ಲಿರಲಿದೆ.ಸ್ಮಾರ್ಟ್ ಲಾಕ್ ಡೌನ್ ಜಾರಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದು ಜಾರಿಯಾದರೆ ಮದ್ಯದಂಗಡಿ ತೆರೆಯಲು, ಎಂಎಸ್‌ಐಲ್‌ನಿಂದ ಮದ್ಯ ಮಾರಾಟ ಅವಕಾಶ ನೀಡುವ ಸಾಧ್ಯತೆ ಇದೆ. ಕೂಲಿ ಕಾರ್ಮಿಕರಿಗೆ ಉದ್ಯೋಗ ಮಾಡಲು ಅವಕಾಶ ದೊರೆಯಲಿದೆ. ಉತ್ಪಾದನಾ ವಲಯದಲ್ಲಿ ಅವಕಾಶ ಸಿಗಲಿದೆ. ಶೇಕಡ 50 ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅನುವು ಮಾಡಿಕೊಡುವ ಸಾಧ್ಯತೆ ಇದೆ. ಕೃಷಿ ಉತ್ಪನ್ನಗಳ ಸರಬರಾಜು, ಸಾಗಾಣಿಕೆಗೆ ನಿರ್ಬಂಧ ತೆರವು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶ ಸಿಗಲಿದ್ದು, ಐಟಿ - ಬಿಟಿಯವರಿಗೆ ಶೇಕಡ 50 ರಷ್ಟು ಕೆಲಸ ಮಾಡಲು ಅವಕಾಶ ದೊರೆಯಲಿದೆ. ಕೋರೋನಾ ಪೀಡಿತ ಪ್ರದೇಶಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸುವ ಬಗ್ಗೆ ಚರ್ಚೆ ನಡೆದಿದೆ. ರೆಡ್, ಆರೆಂಜ್ ಮತ್ತು ಗ್ರೀನ್ ವಿಭಾಗಗಳಾಗಿ ವಿಂಗಡನೆ ಮಾಡಲಾಗುತ್ತದೆ. ರೆಡ್ ಜೋನ್ ನಲ್ಲಿ ಭದ್ರತೆಯನ್ನು ಕಠಿಣ ನಿಯಮಗಳನ್ನು ಹೇರಲಾಗುತ್ತದೆ. ಆದರೆ ಆರೆಂಜ್ ಜೋನ್ ನಲ್ಲಿ ಸೋಂಕಿತ ಪ್ರಕರಣ ಇರುವ ಕಡೆ ಮಾತ್ರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ. ಗ್ರೀನ್ ಜೋನ್ ನಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.
ಆಯಾ ಜಿಲ್ಲೆಗಳು ಹಾಗೂ ಪ್ರದೇಶಗಳಲ್ಲಿ ನಿಯಮ ಸಡಿಲಿಕೆ ಮಾಡಲಾಗುತ್ತದೆ. ವ್ಯಾಪಾರ ವಹಿವಾಟು, ಅಂಗಡಿ ಮುಗ್ಗಟ್ಟು ತೆರಯಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಉದ್ಯೋಗ ತೆರೆಯುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಸಿಗಲಿದೆ. ರಾಷ್ಟ್ರೀಯ ಗ್ರಾಮೀಣ ಮಹಾತ್ಮ ಗಾಂಧಿ ಯೋಜನೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಸಿಗಲಿದ್ದು, ಗ್ರಾಮೀಣ ಭಾಗದವರಿಗೆ ಕೆಲಸ ಕೊಡಲು ಅವಕಾಶ ಮಾಡಲಾಗುತ್ತದೆ.ಎಲ್ಲೆಲ್ಲಿ ಕೊರೋನಾ ಪ್ರಕರಣ ಜಾಸ್ತಿ ಇವೆ ಅಲ್ಲಿ ಮತ್ತಷ್ಟು ಬಿಗಿ ಕ್ರಮ ಕೈಗೊಂಡು ಕೊರೋನಾ ಕಡಿಮೆ ಇರುವ ಕಡೆ ಲಾಕ್ ಡೌನ್ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಆರ್ಥಿಕ ಸಂಪನ್ಮೂಲಗಳಿಗೆ ಕ್ರೋಢೀಕರಣಕ್ಕೆ ಮರು ಚಾಲನೆ ನೀಡಲಿದೆ ಎಂದು ಮೂಲಗಳು ತಿಳಿಸಿವೆ.