ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ: ಎಚ್. ಡಿ. ದೇವೇಗೌಡ

ಕಲಬುರಗಿ, ನ. 11 :       ಒಂದಾನೊಂದು ಕಾಲದಲ್ಲಿ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ಭದ್ರವಾಗಿತ್ತು. ಆದರೀಗ ಪಕ್ಷ ಕುಸಿದಿರುವುದರಿಂದ ಪುನಃ ಸಂಘಟನೆ ಮಾಡಲು ಕಲಬುರಗಿಗೆ ಬಂದಿರುವುದಾಗಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ತಿಳಿಸಿದ್ದಾರೆ. ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದಾನೊಂದು ಕಾಲದಲ್ಲಿ ಜನತಾ ಪಾರ್ತಿ ಭದ್ರವಾಗಿತ್ತು. ಆದರಿಂದು ಪಕ್ಷ  ನೆಲಮಟ್ಟಕ್ಕೆ ಕುಸಿದಿದ್ದು, ಮೇಲೆತ್ತುವ ಕೆಲಸ ಕೈಗೊಳ್ಳಲಾಗುತ್ತಿದೆ ಎಂದರು. ಮಾಧ್ಯಮದವರನ್ನು ಬಿಟ್ಟು ನಾನಿಲ್ಲ, ನಿಮ್ಮ ಮುಂದೆ ನಾನು ಕುಳಿತ್ತಿದ್ದೇನೆ. ನಿಮ್ಮ ಸಹಕಾರ ಅಗತ್ಯ ಎಂದು ತಿಳಿಸಿದರು. ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳನ್ನು ಗೆಲುತ್ತೇವೆ ಎಂಬ ನಂಬಿಕೆ ಇಲ್ಲ. ಏಳೆಂಟು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿದೆ. ಹಾಗೆಂದು ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಜೊತೆಗಿನ ಮೈತ್ರಿ ಬಗ್ಗೆ ನಾನು ವಿಶ್ಲೇಷಿಸುವುದಿಲ್ಲ. ನಮಗೀಗ ಅವರ ಸಹವಾಸವೂ ಬೇಡವೇ ಬೇಡ ಎಂದು ಹೇಳುವ ಮೂಲಕ ಉಪ ಚುನಾವಣೆಯಲ್ಲಿ  ಕಾಂಗ್ರೆಸ್ ಜೊತೆಗಿನ ಮೈತ್ರಿ ನಡೆಯುವುದಿಲ್ಲ ಎಂದು ಪುನರುಚ್ಚರಿಸಿದರು. ಹಂತಹಂತವಾಗಿ ನನ್ನ ಶಕ್ತಿ ಕುಂದುತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, ಬಿಜೆಪಿ, ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳ ಮಧ್ಯೆ ನಮ್ಮ ಪಕ್ಷದ ಆಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದರು. ನಾನು ಮಾಜಿ ಪ್ರಧಾನಿ, ಇದೀಗ ಮಗ ಎಚ್ ಡಿ ಕುಮಾರ್ ಸ್ವಾಮಿ ಕೂಡ ಅಧಿಕಾರ ಕಳೆದುಕೊಂಡು ಮಾಜಿ ಮುಖ್ಯಮಂತ್ರಿಯಾಗಿದ್ದಾನೆ. ನಾನು ಸೋತಿದಕ್ಕೆ ಯಾರನ್ನು ಹೊಣೆ ಮಾಡುವುದಿಲ್ಲ ಎಂದರು. 1989ರಲ್ಲಿ ಸೋತೆ, ಅಂದು ಎಲ್ಲರನ್ನೂ ಪಕ್ಷದಿಂದ ಹೊರಹಾಕಿದ್ದರು. ರಾಜಕೀಯ ಜೀವನದಲ್ಲಿ ಮೂರು ಬಾರಿ ಸೋಲು ಅನುಭವಿಸಿದ್ದೇನೆ. ಮುಂದೆ ಭೀಷ್ಮನಂತೆ ಚುನಾವಣೆಗಳನ್ನು ಎದುರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಜೊತೆ ಮೈತ್ರಿ ಬಗ್ಗೆ ಬಿಚ್ಚಿಟ್ಟರು.