ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ: ಖಂಡ್ರೆ

ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ: ಖಂಡ್ರೆ There is no confusion in the state Congress: Khandre

ಲೋಕದರ್ಶನ ವರದಿ 

ಜಮಖಂಡಿ 06: ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಇರುವದು ಅಧಿಕಾರಕ್ಕಲ್ಲ ಜನರ ಸೇವೆಗೆ ಇದು ಸೇವಾಪಕ್ಷ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.  

ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನೀರೀಕ್ಷಿತ ಉಪ ಚುನಾವಣೆಗಳ ಫಲಿತಾಂಶಗಳು ಬಂದಿವೆ ಇದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೆ ಗೊಂದಲ ಸೃಷ್ಠಿಯಾಗುವುದಿಲ್ಲ. ಮೂರು ವರ್ಷಗಳ ಕಾಲ ನುಡಿದಂತೆ ನಡೆದು ಜನಪರ ಆಡಳಿತ ನೀಡಿದ್ದೇವೆ. ಉಳಿದ ಇನ್ನೆರಡು ವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದ ಜನಹಿತದ ದೃಷ್ಠಿಯನ್ನಿಟ್ಟುಕೊಂಡು ಕೆಲಸ ಮಾಡುತ್ತೇವೆ. ಬಡವರೂ ಸೇರಿದಂತೆ ಜ್ಯಾತ್ಯಾತೀತವಾಗಿ ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು. 

ಉಪಚುನಾವಣೆ ;- ಬಾಗಲಕೊಟೆ ಹಾಗೂ ದಾವಣಗೆರೆಯ ಮತದಾರರು ಜನಪರ ಆಡಳಿತಕ್ಕೆ ಮತ ನೀಡಿದ್ದಾರೆ ಎಲ್ಲ ಸಮಾಜದವರ ಬೆಂಬಲ ಕಾರ್ಯಕರ್ತರ ಶ್ರಮದಿಂದ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಪಕ್ಷದ ಸಿದ್ಧಾಂತ ಮತ್ತು ಸರ್ಕಾರದ ಸಾಧನೆಗೆ ದೊರೆತ ಜಯವಾಗಿದೆ.  ಕಾಂಗ್ರೆಸ್ ಗೆಲುವಿನ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿ,ಕೆ,ಶಿವಕುಮಾರ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಮುಖಂಡರ ಶ್ರಮವಿದೆ ಎಂದು ಅಭಿಪ್ರಾಯ ಪಟ್ಟರು. ಮುಂಬರುವ 2028ರ ಚುನಾವಣೆಗಳಿಗೆ ಉಪ ಚುನಾವಣೆಗಳು ಫಲಿತಾಂಶಗಳು ಕಾಂಗ್ರೆಸ್ ಗೆಲುವಿನ ಸಂದೇಶ ನೀಡಿವೆ ಎಂದರು. 

ಪಂಚರಾಜ್ಯಗಳ ಚುನಾವಣೆ ; ಕೇರಳದ ಪ್ರಜ್ಞಾವಂತ ಮತದಾರರು ಯುಡಿಎಫ್‌ಗೆ 89 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಅದರಂತೆ ತಮಿಳು ನಾಡಿನ ಜನ ಟಿವಿಕೆಗೆ ಮನ್ನಣೆ ನೀಡಿದ್ದು ಜನರು ಬದಲಾವಣೆ ಬಯಸಿದ್ದಾರೆ ಎಂದು ತಿಳಿಸಿದರು.  

ಇದೇ  ಸಂದರ್ಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಮುಖಂಡರಾದ ಶ್ರೀಶೈಲ ದಳವಾಯಿ, ಮಹೇಶ ಕೋಳಿ ಸೇರಿದಂತೆ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರು ಇದ್ದರು.