ಧಾರವಾಡ 09: ಕಲಾವಿದ ಶಿವಕುಮಾರ ಅವರ ಕಲಾಕೃತಿಗಳಲ್ಲಿ ಕ್ರಿಯೇಟಿವಿಟಿ ಇದ್ದು, ಅವರ ಬಹುಮುಖ ಪ್ರತಿಭೆಯನ್ನು ತಿಳಿಸುತ್ತದೆ. ವಿವಿಧ ತೆರನಾದ ಪಕ್ಷಿಗಳ ಚಿತ್ರಣವನ್ನು ಮಾಡಿದ್ದು, ಅವುಗಳಲ್ಲಿ ರೇಖೆ, ಬಣ್ಣ, ಸಂಯೋಜನೆ ಅಂದವಾಗಿ ಮೂಡಿ ಬಂದಿದೆ ಎಂದು ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯದೊಂದಿಗೆ ಧಾರವಾಡದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ದಿ. 08ರಂದು ಜರುಗಿದ ಬಿಜಾಪೂರದ ಯುವ ಕಲಾವಿದ ಶಿವಕುಮಾರ ಚಿ. ಹಿರೇಮಠ ಇವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಯಾನಂದ ಕಾಮಕರರವರು, ಮಾತನಾಡಿ ಕಲಾವಿದ ಶಿವಕುಮಾರ ಅವರಿಗೆ ಮಾರ್ಗದರ್ಶನ ಮಾಡಿದರು. ಕಲಾವಿದನ ಕಲಾಕೃತಿಗಳಲ್ಲಿ ಪ್ರತಿಭೆಯಿದ್ದು, ಹೆಚ್ಚಿನ ಶ್ರಮ ಅಗತ್ಯವೆಂದರು ಹೆಚ್ಚು ಹೆಚ್ಚು ಕಲಾಕೃತಿಗಳನ್ನು ರಚಿಸಿದಾಗ ಕಲಾ ನೈಪುಣ್ಯತೆ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಸರಕಾರಿ ಚಿತ್ರಕಲಾ ಕಾಲೇಜಿನ ಮುಖ್ಯಸ್ಥ ಬಸವರಾಜ ಕುರಿಯವರ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಪಕ್ಷಿ ಸಂಕುಲ ಮಾಯವಾಗುತ್ತಿದ್ದು, ಶಿವಕುಮಾರ ಕಲಾಕೃತಿಗಳಲ್ಲಿ ವಿವಿಧ ಜಾತಿಯ ಪಕ್ಷಿಗಳನ್ನು ತಮ್ಮ ಕುಂಚದ ಮೂಲಕ ಕ್ಯಾನ್ವ್ವಾಸಿನಲ್ಲಿ ಸೆರೆ ಹಿಡಿದ್ದಿದ್ದಾರೆ. ಅವು ಸೃಜನಾತ್ಮಕ ರೀತಿಯಲ್ಲಿ ರಚನೆಯಾಗಿದ್ದು, ಕಲಾವಿದನ ಕಲ್ಪನೆಯಲ್ಲಿ ಅಂದವಾಗಿ ಮೂಡಿಬಂದಿದೆ ಎಂದರು.
ಕಲಾವಿದ ಶಿವಕುಮಾರ ಚಿ. ಹಿರೇಮಠ, ಇವರು ಸ್ವಾಗತಿಸಿದರು ಜಿ.ಸಿ ಕೋಟೂರ, ಎಸ್.ಕೆ. ಪತ್ತಾರ, ಎನ್.ಎನ್ ಚಿನ್ನಣ್ಣವರ, ಎಸ್.ಎಂ. ಕಾಂಬಳೆ, ಶಿವಕುಮಾರ ಕಂಕನವಾಡಿ, ಹರ್ಷ ಗಾಂವ್ಕರ ಉಪಸ್ಥಿತರಿದ್ದರು.
ಚಿತ್ರಕಲಾ ಪ್ರದರ್ಶನವು ದಿ. 08ರಿಂದ 10ರ ಬೆಳಿಗ್ಗೆ 10:30ರಿಂದ ಸಾಯಂಕಾಲ 6:00 ಗಂಟೆಯ ವರೆಗೆ ಜರುಗುತ್ತದೆ.