ಮುಂಬೈ, ಜೂನ್ ೧೪,ಮಹಾರಾಷ್ಟ್ರದ ಕಾಂಗ್ರೆಸ್-ಶಿವಸೇನೆ-ಎನ್‌ಸಿಪಿ ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಪಕ್ಷಗಳ ನಡುವೆ ಅಭಿಪ್ರಾಯ ಬೇಧಗಳಿವೆ ಎಂಬುದನ್ನು ಹಿರಿಯ ಕಾಂಗ್ರೆಸ್ ನಾಯಕ, ಸಂಪುಟ ಸಚಿವ ಅಶೋಕ್ ಚವಾಣ್ ಒಪ್ಪಿಕೊಂಡಿದ್ದಾರೆ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲು ಮೈತ್ರಿ ಪಕ್ಷ ಕಾಂಗ್ರೆಸ್ ಬಯಸಿದ್ದು, ಮುಂದಿನ ಎರಡು ದಿನಗಳಲ್ಲಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಮಹಾ ವಿಕಾಸ್ ಅಗಡಿಯ ಮೈತ್ರಿ ಪಕ್ಷಗಳ ನಡುವೆ ಕೆಲವು ಸಮಸ್ಯೆಗಳಿವೆ. ಈ ಎಲ್ಲ ಅಂಶಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಪರಿಹಾರಕಂಡುಕೊಳ್ಳಲು ಇನ್ನೆರಡು ದಿನಗಳಲ್ಲಿ ಪಕ್ಷದ ನಾಯಕರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಚವಾಣ್ ತಿಳಿಸಿದ್ದಾರೆ.
ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳುವಂತೆ ತಮಗೆ ಆಹ್ವಾನಿಸುತ್ತಿಲ್ಲ ಎಂದು ಕೆಲ ತಿಂಗಳುಗಳಿಂದ ಕಾಂಗ್ರೆಸ್ ನಾಯಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ -೧೯ ಪ್ರಸರಣ ತಡೆ ಸೇರಿದಂತೆ ವಿವಿಧ ಮಹತ್ವದ ವಿಷಯಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ , ಎನ್‌ಸಿಪಿ ಪರಮೋಚ್ಛ ನಾಯಕ ಶರದ್ ಪವಾರ್ ಅವರೊಂದಿಗೆ ಹಲವಾರು ಬಾರಿ ಸಭೆ ನಡೆಸಿದ್ದಾರೆ. ಆದರೆ, ಈ ಸಭೆಗಳಿಗೆ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ನಾಯಕರನ್ನು ಆಹ್ವಾನಿಸದಿರುವುದು ಪಕ್ಷದ ನಾಯಕರಲ್ಲಿ ತೀವ್ರ ಅಸಮಧಾನ ವ್ಯಕ್ತವಾಗಿದೆ. ರಾಜ್ಯ ವಿಧಾನಪರಿಷತ್ತಿಗೆ ರಾಜ್ಯಪಾಲರ ಕೋಟಾದಲ್ಲಿ ನಾಮಕರಣಗೊಳಿಸುವ ಕುರಿತು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಬಾಳಾ ಸಾಹೇಬ್ ಥೋರತ್ ಹಾಗೂ ಅಶೋಕ್ ಚವಾಣ್ ಸೋಮವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.