ರಂಗಭೂಮಿ ಹೊಸ ಅರಿವನ್ನು ನೀಡುವ ಮಾಧ್ಯಮ: ಹುಲುಗಪ್ಪ ಕಟ್ಟಿಮನಿ
Theatre is a medium that imparts new awareness: Hulugappa Kattimani
ಲೋಕದರ್ಶನ ವರದಿ
ಬಳ್ಳಾರಿ, ಆ. 5: ರಂಗಭೂಮಿ ಸಮಾಜದಲ್ಲಿ ಹೊಸ ಅರಿವು ಮೂಡಿಸುವ ಶಕ್ತಿಶಾಲಿ ಮಾಧ್ಯಮವಾಗಿದ್ದು, ಅಪರಾಧದ ಹಾದಿಯಲ್ಲಿ ಸಾಗಿದವರ ಬದುಕನ್ನೂ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಅಭಿಪ್ರಾಯಪಟ್ಟರು.
ನಗರದ ಪಂಚಜನ್ಯ ಸಭಾಂಗಣದಲ್ಲಿ ರಂಗ ತೋರಣ ಆಯೋಜಿಸಿದ್ದ ’ರಂಗಚಾವಡಿ’ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರಾಗೃಹಗಳಲ್ಲಿದ್ದ ಕೈದಿಗಳಿಗೆ ರಂಗಭೂಮಿ ತರಬೇತಿ ಹಾಗೂ ನಾಟಕಗಳ ಮೂಲಕ ಆತ್ಮವಿಶ್ವಾಸ ತುಂಬಿ, ಅವರನ್ನು ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸಿದ ಅನುಭವವನ್ನು ಹಂಚಿಕೊಂಡರು.
ವೈವಿಧ್ಯಮಯ ಮನಸ್ಥಿತಿಯ ಕೈದಿಗಳಲ್ಲಿದ್ದ ಪ್ರತಿಭೆಯನ್ನು ಗುರುತಿಸಿ ನಾಟಕಗಳ ಮೂಲಕ ಅವರಲ್ಲಿ ಬದುಕಿನ ಹೊಸ ಭರವಸೆ ಮೂಡಿಸಲಾಯಿತು. ರಂಗಭೂಮಿ ಅವರಿಗೆ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಿತು. ಈ ಕಾರ್ಯದಿಂದ ತಮಗೂ ಅಪಾರ ಆತ್ಮತೃಪ್ತಿ ದೊರೆತಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಯುವಜನರು ರಂಗಭೂಮಿಯತ್ತ ಹೆಚ್ಚಿನ ಆಸಕ್ತಿ ತೋರದಿರುವುದು ಆತಂಕಕಾರಿ ಬೆಳವಣಿಗೆ. ಆದರೆ ಉತ್ತಮ ಗುಣಮಟ್ಟದ ನಾಟಕಗಳನ್ನು ಪ್ರೇಕ್ಷಕರಿಗೆ ನೀಡಿದರೆ ಅವರ ವಿಶ್ವಾಸವನ್ನು ಮತ್ತೆ ಗಳಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಮಿಳುನಾಡಿನ ರಂಗಕಲಾವಿದ ಅಂಬುರಾಜ್, ಹುಲುಗಪ್ಪ ಕಟ್ಟಿಮನಿ ತಮ್ಮ ಜೀವನಕ್ಕೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು. ಸುಮಾರು 18 ವರ್ಷಗಳ ಕಾಲ ಜೈಲು ಜೀವನ ಅನುಭವಿಸಿದ್ದ ತಮ್ಮಂತಹ ಅನೇಕರಿಗೆ ರಂಗಭೂಮಿಯ ಮೂಲಕ ಹೊಸ ಬದುಕು ದೊರೆತಿದ್ದು, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಭಾವುಕರಾಗಿ ನುಡಿದರು.
ಸಂವಾದವನ್ನು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ದಸ್ತಗೀರ್ ಸಾಬ್ ದಿನ್ನಿ ನಡೆಸಿಕೊಟ್ಟರು. ರಂಗ ತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ, ’ರಂಗಚಾವಡಿ’ ಕಲಾವಿದರ ಸಂವಾದ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ರಂಗಕಲಾವಿದೆ ಶ್ರೀಮತಿ ವೀಣಾ ಆದವಾಣಿ ಅವರಿಂದ ರಂಗಗೀತೆಗಳ ಗಾಯನ ನಡೆಯಿತು. ಹಾರ್ಮೋನಿಯಂನಲ್ಲಿ ಮುದ್ದಟನೂರು ತಿಪ್ಪೇಸ್ವಾಮಿ ಹಾಗೂ ತಬಲಾದಲ್ಲಿ ಎಂ. ವೀರೇಶ್ ಕುರುಗೋಡು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಜೆ.ಎಂ.ಆರ್. ಬಸವರಾಜ್, ಸಿದ್ದರಾಮ ಕಲ್ಮಠ, ಲೇಖಕ ವೀರೇಂದ್ರ ರಾವಿಹಾಳ ಸೇರಿದಂತೆ ಹಲವಾರು ರಂಗಕಲಾವಿದರು ಉಪಸ್ಥಿತರಿದ್ದರು.
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ 