ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ: ಡಾ. ಗೀತಾಂಜಲಿ ಕುರುಡಗಿ

ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ: ಡಾ. ಗೀತಾಂಜಲಿ ಕುರುಡಗಿ   The true voice of rebellion is Sindoora Lakshmana: Dr. Geetanjali Kurudagi

ಬೆಳಗಾವಿ 18: ಇತಿಹಾಸವೆಂದರೆ ಕೇವಲ ಕೋಟೆ ಕೊತ್ತಲಗಳಲ್ಲಿ ಅಷ್ಟೇ ಇಲ್ಲ, ಗುಡಿಸಲುಗಳಲ್ಲಿ ಬಡತನದ ಬೇಗೆಯಲ್ಲಿ ಬೆಂದ ಕ್ರಾಂತಿಯ ಜ್ವಾಲೆಗಳಾಗಿ ಪ್ರಜ್ವಲಿಸಿದ ಸ್ವಾತಂತ್ರ್ಯ ಹೋರಾಟದ ನಿಜ ಬಂಡಾಯದ ಧ್ವನಿ ಸಿಂಧೂರ ಲಕ್ಷ್ಮಣ ಎಂದು ಡಾ. ಗೀತಾಂಜಲಿ ಕುರುಡಗಿ ಅಭಿಪ್ರಾಯ ಪಟ್ಟರು.   ರವಿವಾರ ಯುವ ಬರಹಗಾರರ ವೇದಿಕೆ, ಕರ್ನಾಟಕ. ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಬೆಳಗಾವಿಯ ಮಾನವ ಬಂದುತ್ವ ವೇದಿಕೆಯ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಸಿಂಧೂರ ಲಕ್ಷ್ಮಣ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ಸಿಂಧೂರ ಲಕ್ಷ್ಮಣನ ಇಡೀ ಜೀವನ ಚರಿತ್ರೆಯನ್ನು ಸ್ವಾತಂತ್ರ್ಯ ಹೋರಾಟಗಳ ಹಿನ್ನಲೆಯಲ್ಲಿ ಕಟ್ಟಿ ಕೊಡುವ ಮೂಲಕ ಹೋರಾಟದ ಚರಿತ್ರೆಯನ್ನು ಕೇವಲ ಬ್ರಿಟಿಷ್ ಆಡಳಿತದ ಕಡತಗಳ ದೃಷ್ಟಿಯಲ್ಲಿ ನೋಡುವುದಕ್ಕಿಂತ ಜಾನಪದ ಸಾಹಿತ್ಯವಾದ ಲಾವಣಿ, ಸೋಬಾನೆ ಪದ, ಬಿಸುಕಲ್ಲಿನ ಹಾಡುಗಳಂತಹ ವೀರಗಾತೆಗಳನ್ನು ಗಮನಿಸಿದರೆ ಸಿಂಧೂರ ಲಕ್ಷ್ಮಣನ ನಿಜ ಚರಿತ್ರೆಯನ್ನು ಅರ್ಥೈಸಿಕೊಳ್ಳಬಹುದು.

ಘಟ ಹೋದರೂ ಹಿಡಿದ ಹಠ ಬಿಡಲಾರದ ಜಗದಂಕ ಮಲ್ಲ, ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ, ಆದರೆ ಭೌತಿಕವಾಗಿ ಇಲ್ಲದಿದ್ದರೂ ಪ್ರತಿಬಾರಿಯೂ ಬಡವರ ಕಣ್ಣೀರು ಒರೆಸಿದಾಗ ಲಕ್ಷ್ಮಣ ಮತ್ತೆ ಮತ್ತೆ ಹುಟ್ಟಿ ಬರುತ್ತಾನೆ ಎಂದರು.  ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಯುವ ಬರಹಗಾರ ಡಾ. ನೀಲಪ್ಪ ವಾಲಿಕಾರ ವಿಶ್ವವಿದ್ಯಾಲಯಗಳಲ್ಲಿ ಸಿಂಧೂರ ಲಕ್ಷ್ಮಣನ ಅಧ್ಯಯನ ಪೀಠಗಳನ್ನು ಆರಂಭಿಸಿ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಸತ್ಯ ಸಂಗತಿಗಳ ಚರಿತ್ರೆಯನ್ನು ಕಟ್ಟಿಕೊಡಬೇಕು, ಆ ಮೂಲಕ ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರೇಮವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಎಲೆಮರೆಯ ಕಾಯಿಯಂತೆ ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿರುವ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರ  ಚರಿತ್ರೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಯುವ ಬರಹಗಾರರ ವೇದಿಕೆ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.       

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಹಿರಿಯ ಸಾಹಿತಿ ಶ್ರೀ. ಶಿ.ಗು. ಕುಸಗಲ್ಲ ಮಾತನಾಡಿ ನಾವು ಬರೆಯದಿದ್ದರೂ ಇನ್ನೊಬ್ಬರ ಬರವಣಿಗೆಯ ಸ್ಪೂರ್ತಿ ಆಗಬೇಕು; ಅಂತಹ ವ್ಯಕ್ತಿತ್ವ ಸಿಂಧೂರ ಲಕ್ಷ್ಮಣನ ಹತ್ತಿರವಿತ್ತು. ನಾಡಿನ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದು, ಯುವ ಸಮುದಾಯಕ್ಕೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಬೇಕಾಗಿದೆ. ಹೊಸದಾಗಿ ಬರವಣಿಗೆಯಲ್ಲಿ ತೊಡಗಿಕೊಂಡ ಲೇಖಕರಿಗೆ ವೇದನೆಯ ಜೊತೆಗೆ ಸಂವೇದನೆಗಳನ್ನು ದಾಖಲಿಸುವ ಶಕ್ತಿ ಇರಬೇಕು. ಬೆಳಗಾವಿಯ ಯುವ ಬರಹಗಾರರ ವೇದಿಕೆಯು ಸಿಂಧೂರ ಲಕ್ಷ್ಮಣನ ಕುರಿತು ಉಪನ್ಯಾಸವನ್ನು ಏರಿ​‍್ಡಸಿದ್ದು ಸಮಾಜದಲ್ಲಿ ಹೊಸ ಸಂಚಲನವನ್ನುಂಟು ಮಾಡಿದೆ ಎಂದರು.     

ಕಾರ್ಯಕ್ರಮದ ವಿಶೇಷತೆ ಎನ್ನುವಂತೆ ಕು. ಲಕ್ಷ್ಮೀ ಗಡಕರಿ ಹಾಡಿದ ಸಿಂಧೂರ ಲಕ್ಷ್ಮಣ ಲಾವಣಿಯ ಹಾಡು ಸಭೆಯನ್ನು ಮಂತ್ರಮುಗ್ದವಾಗಿಸಿತ್ತು. ವೇದಿಕೆ ಮೇಲೆ ಸಂಚಾಲಕರಾದ ಪ್ರೊ. ದೇಮಣ್ಣ ಸೊಗಲದ, ಡಾ ಬಾಲಕೃಷ್ಣ ನಾಯಕ, ಡಾ. ಮಂಜುನಾಥ ಪಾಟೀಲ, ಬಾಳೇಶ ದಾಸನಟ್ಟಿ  ಉಪಸ್ಥಿತರಿದ್ದರು. ಭೀಮಶಿ ಕನಕನ್ನವರ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಪ್ರತಿಭಾ ಕಲ್ಲಿ ವಂದಿಸಿದರು. ಕು. ಈರಣ್ಣ ಬೇಟಗೇರಿ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಹಿರಿಯರಾದ ಅಶೋಕ ಚಂದರಗಿ, ಡಾ. ಕೆ.ಎನ್‌. ದೊಡ್ಡಮನಿ, ಮಲ್ಲಿಕಾರ್ಜುನ ಲೋಕಳೆ, ಡಾ. ಮಹೇಶ ಗಾಜಪ್ಪನವರ,  ಮಹೇಶ ಡಾಲೆ, ಡಾ. ಸತೀಶ್ ನಾಯ್ಕ್‌, ಜಿ.ಎ. ಗದಗ, ಪ್ರೊ. ಗೌರಿಶಂಕರ್ ಚಿಗರಿ, ಡಾ. ಎಂ.ಐ. ನದಾಫ,  ಬರಮು ಕುರ್ಲಿ, ಸುನಿಲಕುಮಾರ ಜಮನಾಳ, ರಾಘವೇಂದ್ರ ಪೂಜಾರ್, ಆನಂದ ಪಟಾತ, ಕು. ಸುಜಾತ ಮತ್ತಿಕೊಪ್ಪ, ಸಾವಕ್ಕ ದೊಡ್ಡಮನಿ,  ವೈಷ್ಣವಿ ಪಾಟೀಲ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಹಿತಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.