ಧಾರವಾಡ 26: ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ಒಂದಕ್ಕೊಂದು ಪೂರಕವಾಗಿ ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ವಿದ್ಯಾರ್ಥಿ,ಯುವಜನರು ಇವುಗಳ ಆಮಿಷಗಳಿಗೆ ಬಲಿಯಾಗದೇ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಈಶಪ್ಪ ಕೆ.ಭೂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆರ್.ಎಲ್.ಎಸ್. ಕಾಲೇಜು ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು.ಸಮಾಜದ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ಅಳವಡಿಸಿಕೊಳ್ಳಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಮಾತನಾಡಿ, ಯುವಜನರು ಮಾದಕ ವಸ್ತುಗಳಿಗೆ ಬಲಿಯಾಗುವುದು ಎಂದರೆ ತಮ್ಮ ಭವಿಷ್ಯಕ್ಕೆ ತಾವೇ ಕೊಡಲಿ ಪೆಟ್ಟು ಹಾಕಿಕೊಂಡಂತೆ. ವಿಜಯಪುರ ಜಿಲ್ಲೆ, ಆಂಧ್ರಪ್ರದೇಶದ ಕೆಲ ಭಾಗಗಳಲ್ಲಿ ಅಕ್ಕಡಿ ಬೆಳೆಯಾಗಿ ಗಾಂಜಾ ಬೆಳೆಯುವ ಕೆಟ್ಟ ಪದ್ಧತಿ ಇದೆ. ನಮ್ಮ ವ್ಯಾಪ್ತಿಯಲ್ಲಿಯೂ ಇದರ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದೇವೆ ಈಗಾಗಲೇ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದೇವೆ. ಮಾದಕ ವಸ್ತುಗಳು ಮನುಷ್ಯನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಕೂಡ ಇದಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ. ನಮ್ಮಲ್ಲಿ ತಿಳುವಳಿಕೆ ಮತ್ತು ಸಾಮಾಜಿಕ ಪ್ರಜ್ಞೆಯ ಕೊರತೆ ಇರುವುದು ಇದಕ್ಕೆ ಕಾರಣ. ಅನಿಷ್ಟ ಪದ್ಧತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಮಾಹಿತಿದಾರರ ಹೆಸರು ಗೌಪ್ಯವಾಗಿ ಇಡಲಾಗುವುದು.ಮಾದಕ ವಸ್ತುಗಳ ವ್ಯಸನಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರತಿಯೊಬ್ಬ ವಿದ್ಯಾರ್ಥಿಗಳು, ಯುವಜನರು ಮುಂದಾಗಬೇಕು ,ಇದೊಂದು ಸಾಮಾಜಿಕ ಜವಾಬ್ದಾರಿ ಎಂದರು.
ಡಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ನಾಯಕ್ ವಿಶೇಷ ಉಪನ್ಯಾಸ ನೀಡಿ, 1989 ಜೂನ್ 26ರಿಂದ ಪ್ರತಿವರ್ಷ ಜಗತ್ತಿನಾದ್ಯಂತ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ವಿರೋಧಿ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ "ಹೆಲ್ತ್ ಫಾರ್ ಜಸ್ಟಿಸ್, ಜಸ್ಟಿಸ್ ಫಾರ್ ಹೆಲ್ತ್" ಘೋಷವಾಕ್ಯದೊಂದಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಎಸ್.ಚಿಣ್ಣನ್ನವರ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಭವಿಷ್ಯ ಯುವ ಜನತೆಯ ಆರೋಗ್ಯ ಹಾಗೂ ಅವರ ಚಟುವಟಿಕೆಗಳನ್ನು ಅವಲಂಬಿಸಿದೆ. ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಣೆ ತಡೆಯಲು ಪ್ರತಿಯೊಬ್ಬರು ಪಣತೊಡಬೇಕು . ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸಂದರ್ಭಗಳಲ್ಲಿ ತಮ್ಮ ಪಾಲಕರಿಗೆ ದುಶ್ಚಟಗಳನ್ನು ತೊರೆಯುವ ವಾಗ್ದಾನದ ಉಡುಗೊರೆ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ ಮಾತನಾಡಿ, ಉತ್ತಮ ಸಹವಾಸ ಮತ್ತು ಹವ್ಯಾಸಗಳು ನಮ್ಮ ಭವಿಷ್ಯ ರೂಪಿಸುತ್ತವೆ.ಸಮಾಜದಲ್ಲಿ ವೈವಿಧ್ಯಮಯ ಆಕರ್ಷಣೆಗಳು ಇರುತ್ತವೆ ಆದರೆ ನಾವು ವಿವೇಚನೆಯಿಂದ ನಮ್ಮ ಬೇಕು ಬೇಡಗಳನ್ನು ನಿರ್ಧರಿಸಬೇಕು. ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರಬೇಕು ಎಂದರು.
ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುದ್ರಪ್ಪ, ಡಿವೈಎಸ್ ಪಿ ರಾಮನಗೌಡ ಹಟ್ಟಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.ಕರ್ಪುರಮಠ, ಆರ್.ಎಲ್.ಎಸ್.ಪದವಿಪೂರ್ವ ಕಾಲೇಜು ಪ್ರಾಚಾರ್ಯ ಅಶೋಕ ಶಿಂಗೆ, ಡಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ ಕೊಸಗಿ, ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಸುನಂದಾ ಜಿ.ಟಿ. ನಿರೂಪಿಸಿದರು.