ಶಿಕ್ಷಣದ ಪ್ರಗತಿಗೆ ಸಮೂಹ ಮಾಧ್ಯಮಗಳ ಪಾತ್ರ ಮಹತ್ವದ್ದು: ಡಾ. ಜೆ.ಎಂ. ಚಂದುನವರ

ಶಿಕ್ಷಣದ ಪ್ರಗತಿಗೆ ಸಮೂಹ ಮಾಧ್ಯಮಗಳ ಪಾತ್ರ ಮಹತ್ವದ್ದು: ಡಾ. ಜೆ.ಎಂ. ಚಂದುನವರ  The role of mass media is significant in the progress of education: Dr. J.M. Chandunavar

ಲೋಕದರ್ಶನ ವರದಿ 

ಧಾರವಾಡ, ಜು. 29: ಶಿಕ್ಷಣದ ಪ್ರಗತಿಗೆ ಸಮೂಹ ಮಾಧ್ಯಮಗಳು ಪ್ರಮುಖ ಪ್ರೇರಕ ಶಕ್ತಿಯಾಗಿದ್ದು, ಜ್ಞಾನ ಪ್ರಸಾರದಲ್ಲಿ ಅವುಗಳ ಪಾತ್ರ ಅನನ್ಯವಾಗಿದೆ ಎಂದು ಕ.ವಿ.ವಿ. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಜೆ.ಎಂ. ಚಂದುನವರ ಹೇಳಿದರು.  ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಆಯೋಜಿಸಿದ್ದ ‘ಶಿಕ್ಷಣದಲ್ಲಿ ಸಮೂಹ ಮಾಧ್ಯಮಗಳ ಪಾತ್ರ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಭಾರತದಲ್ಲಿ ಅಕ್ಷರಜ್ಞಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುದ್ರಣ ಮಾಧ್ಯಮಗಳ ಮಹತ್ವ ಇನ್ನಷ್ಟು ವೃದ್ಧಿಯಾಗಿದೆ. ಪತ್ರಿಕೆಗಳು ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಕುರಿತು ವಿಶೇಷ ಪುರವಣಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಅಲ್ಲದೆ, ಜನರ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಮೂಲಕ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.  

ಡಿಜಿಟಲ್ ಹಾಗೂ ಯೂಟ್ಯೂಬ್ ಸೇರಿದಂತೆ ಹೊಸ ಮಾಧ್ಯಮಗಳು ಕ್ಷಣಾರ್ಧದಲ್ಲಿ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಶೈಕ್ಷಣಿಕ ವಿಷಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಮಾಧ್ಯಮಗಳ ಕೊಡುಗೆ ಗಮನಾರ್ಹವಾಗಿದೆ ಎಂದು ತಿಳಿಸಿದರು.  

ಪ್ರೊ. ಜಯಲಕ್ಷ್ಮೀ ಯಂಡಿಗೇರಿ ಮಾತನಾಡಿ, ಸಮೂಹ ಮಾಧ್ಯಮಗಳ ಪ್ರಭಾವದಿಂದ ಜಗತ್ತು ಅಂಗೈಯಲ್ಲೇ ಲಭ್ಯವಾಗುತ್ತಿದೆ. ಆದರೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳ ಏಕಾಗ್ರತೆ ಕುಂಠಿತವಾಗುವ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ನಿರ್ಣಾಯಕವಾಗಿತ್ತು. ಸಮಾಜದಲ್ಲಿನ ಅನೇಕ ಹಗರಣಗಳು ಮತ್ತು ಸಮಸ್ಯೆಗಳು ಪತ್ರಿಕೆಗಳ ಮೂಲಕವೇ ಬೆಳಕಿಗೆ ಬಂದಿವೆ ಎಂದು ಹೇಳಿದರು.  

ಶಿವಾನಂದ ಹೂಗಾರ ಪ್ರಾರ್ಥನೆ ನೆರವೇರಿಸಿದರು. ಪ್ರೊ. ಬಿ.ಎಚ್‌. ಕೋಟಿಗೌಡರ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರೂಪಿಸಿದರು. ಎಂ.ಜಿ. ಸುಬೇದಾರ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಪ್ರೊ. ಧನವಂತ ಹಾಜವಗೋಳ, ಡಾ. ಚಂದ್ರಶೇಖರ ರೊಟ್ಟಿಗವಾಡ, ಬಸವರಾಜ ದೇಸೂರ, ಸುಧಾ ಕಬ್ಬೂರ, ಡಾ. ಸಿದ್ಧನಗೌಡ ಪಾಟೀಲ, ನಂದಾ ಗುಳೇದಗುಡ್ಡ, ಶಂಕರ ಮರೇದ, ಎಂ.ಎಂ. ಚಿಕ್ಕಮಠ, ಮಹೇಶ ಪರಸಣ್ಣವರ, ಶ್ರೀಧರ ಗಸ್ತಿ, ರಾಮಚಂದ್ರ ಗೆದ್ದೇಣ್ಣವರ, ಪ್ರಮೀಳಾ ಜಕ್ಕಣ್ಣವರ ಸೇರಿದಂತೆ ಶಿಕ್ಷಣ ಮಂಟಪ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.