ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ

ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ The role of banks is very important in the overall economic development of the district


                         ಧಾರವಾಡ  20: ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸರ್ಕಾರ ಜಾರಿಗೆ ತರುತ್ತಿರುವ ವಿವಿಧ ಜನಹಿತ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪಬೇಕಾದರೆ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು.  ಅವರು ಇಂದು (ಡಿ.20) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಬ್ಯಾಂಕ್‌ರ​‍್ಸ‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  

ವಿಶೇಷವಾಗಿ ಕೃಷಿ, ಸಣ್ಣ ಉದ್ಯಮ, ಸ್ವ ಉದ್ಯೋಗ, ಮಹಿಳಾ ಸ್ವಸಹಾಯ ಗುಂಪುಗಳು ಹಾಗೂ ಯುವಕರಿಗೆ ನೀಡಲಾಗುವ ಸಾಲ ಸೌಲಭ್ಯಗಳು ಸರಿಯಾದ ಸಮಯದಲ್ಲಿ  ಲಭ್ಯವಾಗುವಂತೆ ಎಲ್ಲ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು. 

ಜಿಲ್ಲೆಯಲ್ಲಿ ಬ್ಯಾಂಕುಗಳ ಸಾಲ ವಿತರಣೆ ಮತ್ತು ಠೇವಣಿ ಸಂಗ್ರಹಣೆಯ ಪ್ರಗತಿಯನ್ನು ಪರೀಶೀಲಿಸಿ,  ಸಾಲ, ಠೇವಣಿ ಅನುಪಾತವನ್ನು ಮತ್ತಷ್ಟು ಸುಧಾರಿಸಲು ಎಲ್ಲ ಬ್ಯಾಂಕುಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ನಗದು ರಹಿತ ವಹಿವಾಟುಗಳನ್ನು ಉತ್ತೇಜಿಸುವ ಮೂಲಕ ಆರ್ಥಿಕ ಶಿಸ್ತನ್ನು ಬೆಳೆಸಿಕೊಳ್ಳಬೇಕು ಮತ್ತು ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಗ್ರಾಹಕರಿಗೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.  

 ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕುಗಳು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ಸಾಲ ಮಂಜೂರಾತಿಯಲ್ಲಿ ಅನಗತ್ಯ ವಿಳಂಬ ಆಗಬಾರದು ಮತ್ತು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಯುವಕರಲ್ಲಿ ಉದ್ಯಮಶೀಲತೆ ಬೆಳೆಸಲು ಬ್ಯಾಂಕುಗಳು ಮಾರ್ಗದರ್ಶನ ಮತ್ತು ಹಣಕಾಸು ನೆರವು ಒದಗಿಸಬೇಕೆಂದು ಅವರು ಹೇಳಿದರು. 

ಸರ್ಕಾರಿ ಹಾಗೂ ಅರೆ ಸರ್ಕಾರಿ ಬ್ಯಾಂಕಿನವರು ಸಿಎಸ್‌ಆರ್ ಚಟುವಟಿಕೆಗಳನ್ನು ಕೈಗೊಂಡು, ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯಗಳನ್ನು ತೆರೆಯುವುದು, ಸರಕಾರಿ ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಮ್‌ಗಳನ್ನು ತೆರೆಯುವುದು, ಅಂಗನವಾಡಿ, ಶಾಲಾ ಕಟ್ಟಡಗಳ ದುರಸ್ತಿ ಮಾಡುವುದು ಮುಂತಾದ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ, ಕ್ರಮವಹಿಸಬೇಕು ಎಂದು ಅವರು ಹೇಳಿದರು. 

ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರ ಹಾಗೂ ಶಾಖಾ ವ್ಯವಸ್ಥಾಪಕರ ಸಭೆ ಜರುಗಿಸಿ, ಸಿಎಸ್‌ಆರ್ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿ, ಕ್ರಮವಹಿಸಲು ಶೀಘ್ರದಲ್ಲಿ ಪ್ರತ್ಯೇಕ ಸಭೆ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.  

ಸಭೆಗೆ ಆಹ್ವಾನಿತರಾಗಿದ್ದ ನವಲಗುಂದ ಶಾಸಕ ಎನ್‌. ಹೆಚ್‌. ಕೋನರಡ್ಡಿ ಅವರು ಮಾತನಾಡಿ, ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಗ್ರಾಹಕರಿಗೆ ಉತ್ತಮವಾಗಿ ಸ್ಪಂದಿಸಬೇಕು. ಕರ್ನಾಟಕ ಗ್ರಾಮೀಣ ಬ್ಯಾಂಕ್ ವೀಲೀನಗೊಂಡ ಮೇಲೆ ರೈತರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಬೇಕು ಎಂದು ಹೇಳಿದರು. 

ಸ್ಥಳೀಯ ಭಾಷೆಯ ಸಮಸ್ಯೆ ಬ್ಯಾಂಕ್‌ಗಳಲ್ಲಿ ಕಂಡುಬರುತ್ತದೆ. ರೈತರಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಗಳು ಅತಿ ಹೆಚ್ಚಾಗಿ ಬರುವುದಿಲ್ಲ. ಬ್ಯಾಂಕಿನವರು ಸ್ಥಳೀಯ ಭಾಷೆಗೆ ಅತಿ ಹೆಚ್ಚು ಆದ್ಯತೆ ನೀಡಬೇಕು. ಅಥವಾ ಬ್ಯಾಂಕ್‌ನಲ್ಲಿ ಕನ್ನಡ ಮಾತನಾಡುವವರು ಮ್ಯಾನೇಜರ್ ಅವರ ಜೊತೆ ಇದ್ದು, ರೈತರಿಗೆ ಸರಿಯಾಗಿ ಸ್ಪಂದನೆಯನ್ನು ನೀಡಬೇಕು, ಅವರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು. 

ಲೀಡ್ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಬಸವರಾಜ ಗಡಾದವರ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.  

 ವೇದಿಕೆಯಲ್ಲಿ  ಆರ್‌.ಬಿ.ಐ ಬೆಂಗಳೂರುದ ಸಹಾಯಕ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ನಾಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಯೂರ್ ಕಾಂಬಳೆ, ಬ್ಯಾಂಕ್ ಆಫ್ ಬರೋಡಾ ಉಪ-ಪ್ರಾದೇಶಿಕ ವ್ಯವಸ್ಥಾಪಕ ಅಮರೇಶ ಗೌಡ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ, ಧಾರವಾಡ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಅವರು ಉಪಸ್ಥಿತರಿದ್ದರು.  

ಸಭೆಯಲ್ಲಿ ವಿವಿಧ ಬ್ಯಾಂಕುಗಳ ಜಿಲ್ಲಾ ಮಟ್ಟದ ವ್ಯವಸ್ಥಾಪಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.