ನವದೆಹಲಿ, ಮಾ ೨೦, ಪ್ರಧಾನಿ ನರೇಂದ್ರ ಮೋದಿ ಕೊರೊನಾ ವೈರಸ್ ಸಂಬಂಧ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ನಂತರ ದೇಶದಲ್ಲಿ ಹಣದುಬ್ಬರ ಹೆಚ್ಚಳಗೊಂಡು ಮಾರುಕಟ್ಟೆಯಿಂದ ಹಲವು ಅಗತ್ಯವಸ್ತುಗಳು ಕಣ್ಮರೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ಲೋಕಸಭೆಯಲ್ಲಿ ದೂರಿದ್ದಾರೆ.
ಶೂನ್ಯ ವೇಳೆಯಲ್ಲಿ, ಪ್ರಧಾನಿ ಮೋದಿ ಗುರುವಾರ ರಾತ್ರಿ ದೇಶ ಉದ್ದೇಶಿಸಿ ಮಾಡಿದ ಭಾಷಣ ಪ್ರಸ್ತಾಪಿಸಿದ ಚೌಧರಿ, ಭಾರತ ಮಾತ್ರವಲ್ಲ ಇಡೀ ಜಗತ್ತು ಮಾರಣಾಂತಿಕ ವೈರಸ್ ವಿರುದ್ದ ಸಮರಸಾರಿದೆ, ಈ ಸಮರದಲ್ಲಿ ಸರ್ಕಾರದ ಜೊತೆ ಕಾಂಗ್ರೆಸ್ ಪಕ್ಷವೂ ಜೊತೆಗೂಡಲಿದೆ.
ಆದರೆ, ಪ್ರಧಾನಿ ಭಾಷಣದ ನಂತರ ದೇಶದ ಬೃಹತ್ ನಗರಗಳಲ್ಲಿ ಅತ್ಯಗತ್ಯ ವಸ್ತುಗಳು ಮಾರುಕಟ್ಟೆಗಳಿಂದ ಧಿಡೀರ್ ನಾಪತ್ತೆಯಾಗಿವೆ ಬೆಲೆಗಳು ಏರಿಕೆಗೊಂಡಿವೆ ಎಂದು ದೂರಿದರು
ಮಾರುಕಟ್ಟೆಗಳಲ್ಲಿ ಆಹಾರ ಉತ್ಪನ್ನಗಳ ಅಕ್ರಮ ದಾಸ್ತಾನು ಹೆಚ್ಚಳಗೊಂಡಿದ್ದು, ಕಾಳಸಂತೆಕೋರರು ಪರಿಸ್ಥಿತಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಸರ್ಕಾರ ಕೂಡಲೇ ತುರ್ತು ಕ್ರಮಗಳನ್ನುಕೈಗೊಳ್ಳುವ ಆಗತ್ಯವಿದೆ ಎಂದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ದೇಶದ ಹಿತದೃಷ್ಟಿಯಿಂದ ಅತ್ಯಂತ ಅಗತ್ಯವಾಗಿರುವ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ನಾವೆಲ್ಲರೂ ಕೊರೊನೊ ವೈರಸ್ ಸಾಂಕ್ರಾಮಿಕದ ವಿರುದ್ದ ಒಟ್ಟಾಗಿ ಹೊರಾಡಬೇಕು ಎಂದರು.
ಮಾರುಕಟ್ಟೆಗಳಲ್ಲಿ ಅಗತ್ಯ ವಸ್ತುಗಳು ನಾಪತ್ತೆಯಾಗಿವೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಚಿವರು, ಇದು ತಪ್ಪು ಮಾಹಿತಿ ಎಂದು ಹೇಳಿದರು.
ಶೂನ್ಯ ವೇಳೆಯಲ್ಲಿ ಕೊರೊನಾ ವೈರಸ್, ಕಾರ್ಮಿಕರು ಹಾಗೂ ಅನೌಪಚಾರಿಕ ವಲಯದ ಶ್ರಮಿಕರ ಮೇಲೆ ಉಂಟುಮಾಡುವ ಪರಿಣಾಮಗಳ ಕುರಿತು ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ತಮ್ಮ ಕಳವಳ ವ್ಯಕ್ತಪಡಿಸಿದರು.
ಡಿಎಂಕೆ ಪಕ್ಷದ ಕೆ.ವೀರಸ್ವಾಮಿ, ಕೊರೊನಾ ವೈರಸ್ ನಿಂದಾಗಿ, ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಫಿಲಿಫೈನ್ಸ್ ನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ವಾಪಸ್ಸು ಬರಲು ಸಾಧ್ಯವಾಗುತ್ತಿಲ್ಲ. ಅವರ ವ್ಯಾಸಂಗ ಮಾಡುತ್ತಿದ್ದ ಕಾಲೇಜುಗಳು, ಹಾಸ್ಟೆಲ್ ಗಳು ಬಂದ್ ಆಗಿವೆ ಅವರು ಆಹಾರದ ಕೊರತೆ ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.
ಈ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಡಿಎಂಕೆ ಸದಸ್ಯೆ ಕನಿಮೋಳಿ, ದೇಶದ ಕೆಲವು ಕಂಪನಿಗಳು ಹಾಗೂ ಉದ್ಯಮಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿವೆ. ಆದರೆ, ಮನೆ ಗೆಲಸದವರು, ಟ್ಯಾಕ್ಸಿ ಚಾಲಕರು, ದಿನಗೂಲಿ ಕಾರ್ಮಿಕರ ಬದುಕು ಅತಂತ್ರಗೊಂಡಿದೆ ಈ ಜನರ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು.ಅನೌಪಚಾರಿಕ ವಲಯದ ಕಾರ್ಮಿಕರ ಜೀವನ ರಕ್ಷಣೆಗೆ ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ಕನಿಮೋಳಿ ಒತ್ತಾಯಿಸಿದರು.ಕಾಂಗ್ರೆಸ್ ನ ಪ್ರಣೀತ್ ಕೌರ್ ಅವರು ಬಡ ಆಟೋ ಚಾಲಕರು ಸೇರಿದಂತೆ ಅಂದು ದುಡಿದು ಅಂದೇ ತಿನ್ನಬೇಕಾದ ಬಡವರ ಬದುಕಿನ ಮೇಲೆ ಸದ್ಯದ ಪರಿಸ್ಥಿತಿ ಗಂಭೀರ ಪರಿಣಾಮ ಉಂಟುಮಾಡಿದೆ ಎಂದು ಹೇಳಿದರು.