ಸಾಹಿತ್ಯ ಕಲೆಗಳ ಉದ್ದೇಶ ವಿಚಾರ ಕ್ರಾಂತಿ: ಯಲ್ಲಪ್ಪ ಹಿಮ್ಮಡಿ

ಸಾಹಿತ್ಯ ಕಲೆಗಳ ಉದ್ದೇಶ ವಿಚಾರ ಕ್ರಾಂತಿ: ಯಲ್ಲಪ್ಪ ಹಿಮ್ಮಡಿ  The purpose of literary arts is a revolution in thought: Yallappa Himmadi

ಬೆಳಗಾವಿ, 25 : ಕಲೆಗಾಗಿ ಕಲೆ ಎನ್ನುವುದು ಅವಾಸ್ತವವಾಗಿದ್ದು ಇಂದಿನ ಆಧುನಿಕ ಜಗತ್ತಿನ ಎಲ್ಲ ಸಂಕಟಗಳ ನಿವಾರಣೆಗೆ ಕಲೆ ಸಾಹಿತ್ಯವನ್ನು ಒಂದು ಸಾಧನವಾಗಿ ಬಳಸಿಕೊಳ್ಳುವುದು ಅನಿವಾರ್ಯವಾಗಿರುವುದರಿಂದ ಸಾಹಿತ್ಯ ಕಲೆಗಳ ಮೂಲ ಉದ್ದೇಶ ವಿಚಾರ ಕ್ರಾಂತಿಯಾಗಿದೆ. ಸಾಮಾಜಿಕ ಬದಲಾವಣೆಗಾಗಿ, ಮಾನವೀಯತೆಯ ಉಳಿವಿಗಾಗಿ ಬರಹಗಾರರು ಮತ್ತು ಕಲಾವಿದರು ತಮ್ಮ ಸೃಜನಶೀಲತೆಯ ಅನನ್ಯತೆಯನ್ನು ಪ್ರಕಟಿಸಬೇಕು ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.  

ಅವರಿಂದು ನಗರದ ಮಾನವ ಬಂದುತ್ವ ವೇದಿಕೆಯ ಸಭಾಂಗಣದಲ್ಲಿ ಗೋಕಾವಿ ಗೆಳೆಯರ ಬಳಗ ಹಾಗೂ ಮಾನವ ಬಂಧುತ್ವ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಏರಿ​‍್ಡಸಿದ್ದ ಸಾಹಿತಿ ಜಯಾನಂದ ಮಾದರ್ ಅವರ ರಾಗರಸಗೀತೆ ಗ್ರಂಥದ ಜನಾರೆ​‍್ಣ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.  

ಒಂದು ಕಾಲದಲ್ಲಿ ಶೋಷಣೆಗೊಳಗಾದವರು ತಮ್ಮನ್ನು ಶೋಷಿಸಿದವರಿಗೆ ನಾವೂ ನಿಮ್ಮಂತೆ ಮನುಷ್ಯರಲ್ಲವೇ? ಎಂದು ದೈನ್ಯತೆಯಿಂದ ಕೇಳುತ್ತಿದ್ದರು. ಆದರೆ ಇಂದು ಮನುಷ್ಯತ್ವವೇ ಇಲ್ಲದೆ ಅಮಾಯಕರ ಮೇಲೆ ದೌರ್ಜನ್ಯ ಎಸಗುವ ಶೋಷಕರಿಗೆ ನೀವೂ ನಮ್ಮಂತೆ ಮನುಷ್ಯರಲ್ಲವೇ? ಎಂದು ಎದೆಗೆ ನಾಟುವ ಹಾಗೆ ಕೇಳಬೇಕಾಗಿದೆ. ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಅನ್ಯಾಯ ಎಸಗಿದ ಸರಕಾರದ ಕ್ರಮವನ್ನು ಖಂಡಿಸಿ ದೇವನೂರು ಮಹದೇವ, ಬರಗೂರು ರಾಮಚಂದ್ರ​‍್ಪ, ಎಸ್‌.ಜಿ ಸಿದ್ದರಾಮಯ್ಯ, ಸಿ.ಎಸ್ ದ್ವಾರಕನಾಥ್ ಮುಂತಾದವರು ಅಲೆಮಾರಿಗಳ ಪರವಾಗಿ ಧ್ವನಿ ಎತ್ತಿರುವುದು ಸಾಹಿತ್ಯ ಕಲಾವಿದರು ಜನಪರವಾಗಿದ್ದಾರೆ ಎಂಬುದರ ದ್ಯೋತಕವಾಗಿದೆ. ಜಯಾನಂದ ಮಾದರ ಅವರ ರಾಗರಸಗೀತೆ ಕೃತಿಯು ಸಂಗೀತವನ್ನು ಸಾಮಾಜಿಕ ಸಮಾನತೆಗಾಗಿ ಬಳಸಿಕೊಳ್ಳುವ ಆಶಯವನ್ನು ಪ್ರತಿಪಾದಿಸುತ್ತದೆ ಎಂದು ಹೇಳಿದರು.       

ರಾಗ ರಸಗೀತೆ ಕೃತಿಯನ್ನು ಪರಿಚಯಿಸಿದ ರಂಗಕರ್ಮಿ  ಶೀರೀಷ್ ಜೋಶಿ ಅವರು ಜಯಾನಂದ ಮಾದರ ಅವರ ಈ ಕೃತಿ ಸಂಗೀತ, ಸುಗಮ ಸಂಗೀತ, ಭಜನೆ ಮತ್ತು ತತ್ವಪದ ಸಂಗೀತ ಪರಂಪರೆಗಳ ತಾತ್ವಿಕ ಅಧ್ಯಯನದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಅನನ್ಯ ಕೊಡುಗೆಯಾಗಿದೆ ಎಂದು ವಿಶ್ಲೇಷಿಸಿದರು. ರಂಗ ಚಿಂತಕ ರವಿ ಕೋಟಾರಗಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸಾಹಿತಿಗಳಾದವರು ಸಮಾಜದೊಳಗಿನ ನೊಂದ ಜನರ ಧ್ವನಿಯಾಗಿ ಸಾಹಿತ್ಯ ರಚಿಸಬೇಕು. ಕಲಾವಿದರು ಸಮಾಜದ ಪ್ರತಿಬಿಂಬವಾಗಿ ಜನರೆದುರು ನಿಲ್ಲಬೇಕು ಅಂದಾಗ ಸಮಾನತೆಯ ಆಶಯಗಳು ಮುನ್ನಲೆಗೆ ಬರುತ್ತವೆ. ಸಮ ಸಮಾಜ ನಿರ್ಮಾಣವಾಗುತ್ತದೆ. ಜನಪರವಾಗಿ ಕ್ರಿಯಾಶೀಲರಾಗಿರುವ ಜಯಾನಂದ ಮಾದರವರ ಈ ಕೃತಿ ಸಂಗೀತ ಕುರಿತ ಅಧ್ಯಯನ ಮಾತ್ರವಾಗಿರದೆ ಜನಪದ ಸಂಗೀತ ಅಧ್ಯಯನ ಮಾಡುವವರಿಗೆ ಮಾರ್ಗದರ್ಶಿಯಾಗಿದೆ, ಉತ್ತಮ ಆಕರ ಕೃತಿಯಾಗಿದೆ ಎಂದರು. 

ಆಕಾಶವಾಣಿಯ ಸಂಗೀತ ಕಲಾವಿದ ಬಿ. ಸಿ. ದೇಗಾವಿಮಠ, ಡಾ. ಮಲ್ಲಿಕಾರ್ಜುನ್ ಮನ್ಸೂರ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ನ ಸದಸ್ಯ ಯಾದವೇಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ರಜನಿ ಜೀರಗ್ಯಾಳ ಮುಖ್ಯ ಅತಿಥಿಯಾಗಿ ಮಾತನಾಡಿದರು.     

ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಿ. ವೈ. ಮೆಣಸಿನಕಾಯಿ, ಮಹದೇವಿ ಕಿತ್ತೂರ, ಈಶ್ವರಚಂದ್ರ ಬೆಟಗೇರಿ, ಮೀನಾಕ್ಷಿ ಸೂಡಿ, ಶ್ರೀಶೈಲ್ ಶಿರೂರ್, ವಿದ್ಯಾ ರೆಡ್ಡಿ, ಹೇಮಾ ಸೋನಳ್ಳಿ, ಸುನಂದ ಹಾಲಬಾವಿ ಕವಿತೆ ವಾಚಿಸಿದರು. ಬಂಡಾಯ ಸಂಘಟನೆಯ ಜಿಲ್ಲಾ ಸಂಚಾಲಕ ದೇಮಣ್ಣ ಸೊಗಲದ, ಕನ್ನಡ ಅಧ್ಯಾಪಕರ ಪರಿಷತ್ತಿನ ಕಾರ್ಯದರ್ಶಿ ಸುರೇಶ ಹನಗಂಡಿ, ಮಾನವ ಬಂಧುತ್ವ ವೇದಿಕೆಯ ಪ್ರಕಾಶ ಬೊಮ್ಮಣ್ಣವರ್, ಪವನ್ ಮುಂತಾದವರು ಉಪಸ್ಥಿತರಿದ್ದರು. 

ಕೃತಿಕಾರ ಜಯಾನಂದ ಮಾದರ್ ಪ್ರಸ್ತಾವಿಕ ಮಾತುಗಳಾಡಿದರು. ಅರುಣ್ ಸೌತಿಕಾಯಿ ಸ್ವಾಗತಿಸಿದರು, ಆನಂದ್ ಸೋರಗಾವಿ ವಂದಿಸಿದರು. ಕಲಾವಿದ ರಾಮಚಂದ್ರ ಕಾಕಡೆ ನಿರೂಪಿಸಿದರು. ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಜಯಾನಂದ ಮಾದರ್ ಅವರ ರಾಗರಸಗೀತೆ ಕೃತಿಯನ್ನು ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಜನಾರೆ​‍್ಣಗೊಳಿಸಿದರು. ರಾಮಚಂದ್ರ ಕಾಕಡೆ, ರವಿ ಕೊಠಾರಗಸ್ತಿ, ಶೀರೀಷ್ ಜೋಶಿ, ರಜನಿ ಜೀರಿಗ್ಯಾಳ, ಬಿ ಸಿ ದೇಗಾವಿಮಠ, ಯಾದವೇಂದ್ರ ಪೂಜಾರಿ ಉಪಸ್ಥಿತರಿದ್ದರು.