ಕಲಬುರಗಿ, ಏ.15, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಒಂದೇ ದಿನ ಹೊಸದಾಗಿ 17 ಪ್ರಕರಣಗಳು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಸೂರ್ಯ ನಗರ ಕಲಬುರಗಿಯಲ್ಲಿ ಬುಧವಾರ ಹೊಸದೊಂದು ಪ್ರಕರಣ ದೃಢಪಡುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆ ಆಗಿದೆ.1ವರ್ಷದ ಗಂಡು ಮಗುವಿನಲ್ಲಿ (ರೋಗಿ ಸಂಖ್ಯೆ 274 ) ಕೊರೊನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು, ಸದ್ಯ ಮಗುವನ್ನು ನಗರದ ಇಎಸ್ ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಮಗುವಿನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.ಇನ್ನು, ಮಗುವಿಗೆ, ಆತನ ಪೋಷಕರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಅಲ್ಲದೇ
ಯಾವುದೇ ಸೋಂಕಿತರ ಸಂಪರ್ಕದಲ್ಲಿರದ ಒಂದು ವರ್ಷದ ಮಗುವಿಗೆ ಸೋಂಕು ಹೇಗೆ ತಗುಲಿದೆ ? ಎಂಬುದು ಇದೀಗ ಜಿಲ್ಲಾಡಳಿತಕ್ಕೆ ಯಕ್ಷ ಪ್ರಶ್ನೆ ಆಗಿದ್ದು, ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.
ಸದ್ಯ ಮಗುವಿನ ಪೋಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.ಇತ್ತೀಚೆಗೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿಯಲ್ಲಿ 2 ವರ್ಷದ ಮಗುವಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಮತ್ತೊಂದು ಮಗುವಿನಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜನ ಭಯಭೀತರಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಮೂವರನ್ನು ಬಲಿ ಪಡೆದಿದ್ದು, ಇಬ್ಬರೂ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆ ಆಗಿದೆ.