ಕರ್ಣಾಟಕ ಬ್ಯಾಂಕ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು : ರಂಜಿತ್ ಶೆಟ್ಟಿ

ಕರ್ಣಾಟಕ ಬ್ಯಾಂಕ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು : ರಂಜಿತ್ ಶೆಟ್ಟಿ The news circulating about Karnataka Bank is false: Ranjith Shetty

ಕಾರವಾರ 30: ಕರ್ಣಾಟಕ ಬ್ಯಾಂಕ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಕರ್ನಾಟಕ ಬ್ಯಾಂಕ್‌ ಕುಮಟಾ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಹೇಳಿದರು.

ಕಾರವಾರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕಳೆದ ಕೆಲವು ದಿನಗಳಿಂದ ಕರ್ನಾಟಕ ಬ್ಯಾಂಕ್ ಬಗ್ಗೆ ಕೆಲವೊಂದು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. 101 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ, ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಕುರಿತು ವಿವೇಚನಾರಹಿತವಾಗಿ ಪ್ರಕಟಿಸಲಾಗಿರುವ ಈ ಸುದ್ದಿಗಳು ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿವೆ ಎಂದರು.

ಗ್ರಾಹಕರಲ್ಲಿ ಗೊಂದಲ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ.ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದೆಕರ್ಣಾಟಕ ಬ್ಯಾಂಕ್ 101 ವರ್ಷಗಳಿಂದಲೂ ನಿರಂತರವಾಗಿ ಲಾಭ ಗಳಿಸುತ್ತಾ ಬಂದಿದೆ. ಕರ್ನಾಟಕ ಬ್ಯಾಂಕ್‌ನ ಮೊದಲ ಆದ್ಯತೆ ಠೇವಣಿದಾರರ ಹಣದ ಸುರಕ್ಷತೆ ಮತ್ತು ಭದ್ರತೆಯಾಗಿದೆ ಎಂದರು. ಗ್ರಾಹಕರ ನಂಬಿಕೆ, ವಿಶ್ವಾಸ ಮತ್ತು ಸಾಮಾಜಿಕ ಬದ್ಧತೆಗೆ ಪ್ರಸಿದ್ಧಿಯಾಗಿರುವ ಕರ್ನಾಟಕ ಬ್ಯಾಂಕ್ ಅತ್ಯಂತ ಸುದೃಢವಾಗಿದೆ ಎಂದು ನಾವು, ನಮ್ಮ ಗ್ರಾಹಕರಿಗೆ ಸ್ಪಷ್ಟಪಡಿಸಲು ಬಯಸುತ್ತೇವೆ. ಪ್ರಸ್ತುತ, ಕರ್ಣಾಟಕ ಬ್ಯಾಂಕ್ ಶೇ. 19.85 ಕ್ಕಿಂತ ಹೆಚ್ಚಿನ ಬಂಡವಾಳ ಸಾಮರ್ಥ್ಯ ಅನುಪಾತವನ್ನು ಹೊಂದಿದ್ದು, ಇದು ನಮ್ಮ ಬಲವಾದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಬ್ಯಾಂಕ್ ಬಗ್ಗೆಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ಯಾವುದೇ ಆಧಾರವಿಲ್ಲದ, ಸಂಪೂರ್ಣ ದುರುದ್ದೇಶಪೂರಿತ ಹೇಳಿಕೆಗಳಾಗಿವೆ.  

ಬ್ಯಾಂಕ್‌ನ ಮೂಲಭೂತ ಆರ್ಥಿಕ ಸ್ಥಿತಿ ಅತ್ಯಂತ ಬಲವಾಗಿದೆ ಮತ್ತು ಸುದೃಢವಾಗಿದೆ ಎಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ. ಬ್ಯಾಂಕಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಗಾಳಿಸುದ್ದಿಗಳನ್ನು ಹಬ್ಬಿಸಿರುವ ಚಾನೆಲ್, ಇಂತಹ ಆಧಾರರಹಿತ ಗಾಳಿಸುದ್ದಿಗಳನ್ನು ಪ್ರಕಟಿಸುವ ಮೊದಲು ಬ್ಯಾಂಕಿನ ಯಾವುದೇ ಅಧಿಕಾರಿಯನ್ನು ಸಂಪರ್ಕಿಸಿಲ್ಲ ಎಂದರು . ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು , ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಚಾನೆಲ್‌ನ ವಿರುದ್ಧ ಬ್ಯಾಂಕ್ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದರು.ಸಾರ್ವಜನಿಕರು ಮತ್ತು ನಮ್ಮ ಗೌರವಾನ್ವಿತ ಗ್ರಾಹಕರು ಬ್ಯಾಂಕ್‌ನ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಪರಿಗಣಿಸುವಂತೆ ನಾವು ಮನವಿ ಮಾಡುತ್ತೇವೆ. ವದಂತಿಗಳನ್ನು ನಿರ್ಲಕ್ಷಿಸಿ, ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ.ನಂಬಿಕೆ, ಸ್ಥಿರತೆ ಮತ್ತು ಸೇವೆಯು ಕರ್ನಾಟಕ ಬ್ಯಾಂಕ್‌ನ ಆಧಾರಸ್ತಂಭಗಳಾಗಿವೆ ಎಂದು ರಂಜಿತ್ ಶೆಟ್ಟಿ ವಿನಂತಿಸಿದರು. ಬ್ಯಾಂಕ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಸುಭದ್ರವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾರವಾರ ಬ್ರಾಂಚ್‌ನ ಹಿರಿಯ ವ್ಯವಸ್ಥಾಪಕ ಗೌತಮ್ ಶೆಟ್ಟಿ ಇದ್ದರು.