ವೈದ್ಯ ಲೋಕದ ಆದರ್ಶ ವೈದ್ಯ ಅಥಣಿಯ ಡಾ.ಎಸ್‌.ಆರ್‌.ಕೌಲಗುಡ್ಡ ಅಗಲಿಕೆ ತುಂಬಲಾರದ ಹಾನಿ

ವೈದ್ಯ ಲೋಕದ ಆದರ್ಶ ವೈದ್ಯ ಅಥಣಿಯ ಡಾ.ಎಸ್‌.ಆರ್‌.ಕೌಲಗುಡ್ಡ ಅಗಲಿಕೆ ತುಂಬಲಾರದ ಹಾನಿ The loss of Dr. S.R. Kaulagudda, an ideal doctor of the medical world, is an irreparable loss

ಅಥಣಿ 19:  ಅಥಣಿಯವರಾದ ಸದ್ಯ ಧಾರವಾಡ ನಿವಾಸಿಯಾಗಿದ್ದ 40 ಸಾವಿರಕ್ಕೂ ಹೆಚ್ಚು ಮೂಲವ್ಯಾಧಿಗೆ ಸಂಬಂಧಿಸಿದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಮತ್ತು ನೂರಾರು ಹಿರಿ, ಕಿರಿಯ ವೈದ್ಯರಿಗೆ ಮಾರ್ಗದರ್ಶಕರಾಗಿದ್ದ ಡಾ.ಎಸ್‌.ಆರ್‌.ಕೌಲಗುಡ್ಡ ತಮ್ಮ 93 ನೇ ವಯಸ್ಸಿನಲ್ಲಿ ನಿಧನರಾದರು, ಅವರ ಅಗಲಿಕೆ ಇಡೀ ವೈದ್ಯಲೋಕಕ್ಕೆ ತುಂಬಲಾರದ ಹಾನಿಯಾಗಿದೆ.        ಧಾರವಾಡದ ಲೇಡಿ ಲೂರ್ಡ್ಸ (ಜರ್ಮನ್) ಆಸ್ಪತ್ರೆಯಲ್ಲಿ ಪ್ರತಿನಿತ್ಯ ಮೂವತ್ತು ನಲ್ವತ್ತು ರೋಗಿಗಳಿಗೆ ಈ ಇಳಿ ವಯಸ್ಸಿನಲ್ಲಿಯೂ ಮೂಲವ್ಯಾಧಿ ರೋಗಕ್ಕೆ ಶಸ್ತ್ರ ಚಿಕಿತ್ಸೆ ಇಲ್ಲದೆ ಚಿಕಿತ್ಸೆ ಕೊಡುವ ಮೂಲಕ ಜನಾನುರಾಗಿ ವೈದ್ಯರಾಗಿದ್ದರು ಡಾ.ಕೌಲಗುಡ್ಡ. ವಿಶೇಷವಾಗಿ ಚಾಲಕರು, ವಾಹನಗಳ ನಿರ್ವಾಹಕರು, ಇಡೀ ದಿನ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವವರು ಇಂತಹ ತೊಂದರೆಗೆ ಒಳಗಾಗುವುದು ಸಹಜ. ಅವರೆಲ್ಲರೂ ಬರೀ ಧಾರವಾಡದವರಲ್ಲ, ಯಾವುದೇ ಊರಿನವರಾಗಲಿ ಇವರಲ್ಲಿಗೆ ಬಂದು ಸಾವಿರಾರು ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದರು.     1937  ರಲ್ಲಿ  ಡಾ. ಎಸ್ ಆರ್ ಕೌಲಗುಡ್ಡ ಅಥಣಿಯಲ್ಲಿ ಜನಿಸಿದ್ದರು, ಮುಂದೆ 1954  ರಲ್ಲಿ ಪುಣೆಯಿಂದ ಎಮ್‌.ಬಿ. ಬಿಎಸ್, ಸೇಠ್ ಮೆಡಿಕಲ್ ಕಾಲೇಜಿನಿಂದ ಎಮ್ ಎಸ್ ಮತ್ತು ಮುಂಬಯಿನ ಕೆ ಇ ಎಮ್ ಕಾಲೇಜಿನಿಂದ ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಪಡೆದ ಇವರು  ತಮ್ಮ 26 ನೇ ವಯಸ್ಸಿನಲ್ಲಿ  ಸರಕಾರಿ ವೈದ್ಯರಾಗಿ, ಸರ್ಜರಿ ವಿಭಾಗದ ಮುಖ್ಯಸ್ಥರಾಗಿ, ಹಂಗಾಮಿ ಪ್ರಾಂಶುಪಾಲರಾಗಿ ಹುಬ್ಬಳ್ಳಿ ಕೆ ಎಮ್ ಸಿ, ಬಳ್ಳಾರಿ, ಮೈಸೂರಿನಲ್ಲಿ ಸೇವೆ ಸಲ್ಲಿಸಿದರು. ಎಲ್ಲಾ ಪ್ರಕಾರದ ಶಸ್ತ್ರಚಿಕಿತ್ಸೆಯಲ್ಲಿ ಪಾರಂಗತರಾದ ಡಾ.ಕೌಲಗುಡ್ಡರು ಸಾವಿರಾರು ರೋಗಿಗಳ ಪಾಲಿಗೆ ಆಪತ್ ಬಾಂಧವರಾಗಿದ್ದರು.       

1987 ರಲ್ಲಿ ಸ್ವಯಂ ನಿವೃತ್ತಿ ಪಡೆದ ಇವರು ಅದೇ ವರ್ಷ ಧಾರವಾಡದ ಜರ್ಮನ್ ( ಅವರ ಲೇಡಿ ಆಫ್ ಲೂರ್ಡ್ಸ್‌) ಆಸ್ಪತ್ರೆಯಲ್ಲಿ ಸಂದರ್ಶಕ ಶಸ್ತ್ರಚಿಕಿತ್ಸಾ ತಜ್ಞರಾಗಿ ಕಾರ್ಯ ಪ್ರಾರಂಭಿಸಿ 92 ನೇ ವಯಸ್ಸಿನವರೆಗೂ  ತಮ್ಮ ಸೇವೆ ಸಲ್ಲಿಸಿದ ಇವರು ಈ  ಮಧ್ಯೆ ಎಸ್ ಡಿ ಎಮ್ ದಂತ ಮಹಾವಿದ್ಯಾಲಯದಲ್ಲಿ ಎಂಟು ವರ್ಷಗಳ ಕಾಲ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥರಾಗಿಯೂ  ಕೆಲಸ ಮಾಡಿದರು. ದೇಶದ ಹಲವಾರು ವಿಶ್ವವಿದ್ಯಾಲಯ ವ್ಯಾಪ್ತಿಯ (ಮೈಸೂರು, ಮುಂಬಯಿ, ಪುಣೆ, ತಿರುಪತಿ, ನಾಗಾರ್ಜುನ, ಮದ್ರಾಸ್ ಮೊದಲಾದವುಗಳು) ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪರೀಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.  

ಎಲ್ಲ ರೋಗಿಗಳಿಗೆ ಪ್ರಾಮಾಣಿಕ, ಕನಿಷ್ಟ ವೆಚ್ಚದಲ್ಲಿ ಉಪಚಾರ ಸಿಗಬೇಕು, ಹಣಗಳಿಕೆಯೊಂದೇ ವೈದ್ಯರ ಗುರಿಯಾಗಿರಬಾರದು ಸೇವೆಗೆ ಪ್ರಾಧಾನ್ಯತೆ ಕೊಡಬೇಕು ಎನ್ನುವುದೇ ಅವರ ಗುರಿಯಾಗಿತ್ತು.ಯಾವುದೇ ಹಣ, ಮಾನ, ಸನ್ಮಾನಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ತುಂಬಾ ನಿಷ್ಠೆಯಿಂದ ಪ್ರತಿಯೊಬ್ಬ ವೈದ್ಯ ದುಡಿಯಬೇಕು ಎಂದು ಹೇಳುವ ಕೌಲಗುಡ್ಡ ಡಾಕ್ಟರ್ ಸ್ವತಃ ತಮ್ಮ ಜೀವನದ ಉದ್ದಕ್ಕೂ ಈ ನಿಯಮಗಳನ್ನು ಪಾಲಿಸುತ್ತ ಬಂದಿದ್ದರು. ಪ್ರತಿಯೊಂದು ರೋಗಕ್ಕೆ ಶಸ್ತ್ರಚಿಕಿತ್ಸೆ ಒಂದೇ ರಾಮಬಾಣವಲ್ಲ ಎಂದು ಖಚಿತವಾಗಿ ಹೇಳುವ ಕೌಲಗುಡ್ಡ ಅವರು ಮೂಲವ್ಯಾಧಿ ಮತ್ತು ಫಿಷರ್ ಚಿಕಿತ್ಸೆ ಶಸ್ತ್ರಚಿಕಿತ್ಸೆ ಇಲ್ಲದೆಯೂ ಕೂಡ ಮಾಡಬಹುದು ಎಂದು ತೋರಿಸಿಕೊಟ್ಟಿದ್ದರು. ಇಂದಿನ ವೈದ್ಯಕೀಯ ಲೋಕಕ್ಕೆ ವಿಶೇಷವಾಗಿ ಯುವ ವೈದ್ಯರಿಗೆ ಒಂದು ಮಾದರಿಯಾಗಿದ್ದವರು ಡಾ.ಎಸ್ ಆರ್ ಕೌಲಗುಡ್ಡ. ಮೂಲವ್ಯಾಧಿ, ಫಿಷರ್ ಮೊದಲಾದ ತೊಂದರೆಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಿದ ಸಂಖ್ಯೆ ನಲ್ವತ್ತು ಸಾವಿರಕ್ಕೂ ಹೆಚ್ಚು. ಇದು ಈಗಾಗಲೇ ವಿಶ್ವ ದಾಖಲೆಗೆ ಸೇರಿದೆ.        

ಡಾ.ಕೌಲಗುಡ್ಡ ಕೇವಲ ವೈದ್ಯಕೀಯ ಲೋಕಕ್ಕೆ ಮಾತ್ರ ಸೀಮಿತವಾಗದೇ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲೂ ಸದಾ ಮುಂಚೂಣಿಯಲ್ಲಿದ್ದು ಮಾರ್ಗದರ್ಶನ ಮಾಡುತ್ತಿದ್ದರು. ರೋಗಿ ರೋಗದಿಂದ ಮುಕ್ತನಾಗಿ ನಿರೋಗಿಯಾಗಬೇಕು. ಆಗ ಆತನ ಮುಖದಲ್ಲಿ ಕಾಣುವ ಸಮಾಧಾನ, ಸಂತೋಷದ ನಗುವೇ ನಿಜವಾದ ಸನ್ಮಾನ ಎಂದುಕೊಳ್ಳುತ್ತಿದ್ದ ಡಾ. ಎಸ್ ಆರ್  ಕೌಲಗುಡ್ಡ ಇಂದು ನಮ್ಮನ್ನಗಲಿದ್ದಾರೆ. ಅವರ ಅಗಲಿಕೆ ವೈದ್ಯ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ