ಸೋಂಕು ನಿಯಂತ್ರಣವಾಗುವವರೆಗೂ ಜ್ಯುಬಿಲೆಂಟ್ ಕಾರ್ಖಾನೆ ಆರಂಭವಿಲ್ಲ: ಎಸ್ ಟಿ. ಸೋಮಶೇಖರ್

ಬೆಂಗಳೂರು,  ಏ.15, ರಾಜ್ಯದಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ನಿಯಂತ್ರಣವಾಗುವವರೆಗೂ  ನಂಜನಗೂಡಿನ ಜ್ಯುಬಿಲೆಂಟ್​​ ಕಾರ್ಖಾನೆ ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಮೈಸೂರು  ಉಸ್ತುವಾರಿ ಸಚಿವ ಎಸ್​​.ಟಿ ಸೋಮಶೇಖರ್​ ಸ್ಪಷ್ಟಪಡಿಸಿದ್ದಾರೆ.ಇಂದು  ರಾಜ್ಯದಲ್ಲಿ 17 ಹೊಸ ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 10  ಪ್ರಕರಣಗಳು ಮೈಸೂರಿನದ್ದೇ ಆಗಿದ್ದು, ಇದರಲ್ಲಿ 9 ಮಂದಿ ಜ್ಯುಬಿಲೆಂಟ್ ಕಾರ್ಖಾನೆಯ  ನೌಕರರಾಗಿದ್ದಾರೆ. ಈ ಕುರಿತು  ಟ್ವೀಟ್​ ಮಾಡಿರುವ ಅವರು, ಮೊದಲು ಎಲ್ಲವೂ ತಿಳಿಯಾಗಬೇಕು, ನೆಮ್ಮದಿಯಾಗಿ ಕೆಲಸ ಮಾಡುವ  ವಾತಾವರಣ ನಿರ್ಮಾಣವಾಗಬೇಕು, ಆಗ ಮಾತ್ರ ಕಂಪನಿ ತೆರೆಯಲು ಅನುಮತಿ ನೀಡಲಾಗುವುದು ಎಂದು  ತಿಳಿಸಿದ್ದಾರೆ.  ಮೈಸೂರು  ಜಿಲ್ಲೆಯಾದ್ಯಂತ ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‌ ಡೌನ್ 2.0 ಕಟ್ಟುನಿಟ್ಟಾಗಿ  ಪಾಲಿಸಲು ಸೂಚನೆ ನೀಡಲಾಗಿದ್ದು,  ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ವಶಕ್ಕೆ  ಪಡೆದು  ಮೇ 3ರವರೆಗೆ  ಲಾಕ್ ಡೌನ್ ಮುಗಿಯುವವರೆಗೂ ವಾಹನ ವಾಪಸ್ಸು ನೀಡದಂತೆ  ಖಡಕ್  ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇಲ್ಲಿಯವರೆಗೆ  ಮೈಸೂರಿನಲ್ಲಿ 58 ಕೊರೊನಾ ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ಅವುಗಳ ಪೈಕಿ 12  ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 46 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು  ಮಾಹಿತಿ ನೀಡಿದ್ದಾರೆ.