ಹಾವೇರಿ, 31: ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವಿಕಾಸವೇ ಶಿಕ್ಷಣದ ಮೂಲ ಉದ್ಧೇಶವಾಗಿದ್ದು, ತನ್ಮೂಲಕ ಪ್ರತಿಯೊಬ್ಬರೂ ಶಿಕ್ಷಣದ ಮಹತ್ವವನ್ನು ಅರಿತು ಮುನ್ನಡೆಯುವ ಅಗತ್ಯವಿದೆ ಎಂದು ಗೊಟಗೋಡಿ ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಡಾ|| ಡಿ. ಬಿ. ನಾಯಕ ಹೇಳಿದರು.
ಅವರು ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ 2019-20 ನೇ ಶೈಕ್ಷಣಿಕ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಈ ದೇಶಕ್ಕೆ ಯುವಶಕ್ತಿಯ ಅವಶ್ಯಕತೆಯಿದ್ದು, ಮುಂಬರುವ ದಿನಗಳಲ್ಲಿ ಅಭಿವೃದ್ಧಿಯೇ ಇಲ್ಲಿ ಮಾರ್ಧನಿಸಬೇಕಿದೆ. ಯುವಶಕ್ತಿ ಶಿವಶಕ್ತಿಯಾಗಿ ವಿಶ್ವಗುರು ಭಾರತವನ್ನು ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ರೀತಿಯ ಪ್ರತಿಭೆಯಿದ್ದು ಅದನ್ನು ಪ್ರಚೋದಿಸಿ ಹೊರತರುವ ಪ್ರಯತ್ನವಾದಾಗ ಒಬ್ಬ ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ಅರುಣಿಮಾ ಅಂತಹ ಪ್ರತಿಭೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ನಿರಂತರ ವ್ಯಕ್ತಿತ್ವ ವಿಕಾಸಕ್ಕಾಗಿ ಶೃದ್ಧೆ ಮತ್ತು ವಿಶ್ವಾಸ ಅವಶ್ಯವಿರುವಂತೆ ಆತ್ಮವಿಶ್ವಾಸದ ಮೂಲಕ ಚಿಂತನೆ ನಡೆಸಿ ಜ್ಞಾನಿಯಾಗಿ, ವಿಜ್ಞಾನಿಯಾಗಿ, ಸುಜ್ಞಾನಿಯಾಗಿ, ತತ್ವಜ್ಞಾನಿಯಾಗಿ ಕೊನೆಗೆ ಆತ್ಮಜ್ಞಾನಿಯಾಗುವ ಕನಸ್ಸು ಕಾಣಬೇಕಿದೆ. ಜ್ಞಾನಕೇಂದ್ರಿತ ಶಿಕ್ಷಣ ಪಡೆಯುವುದರ ಜೊತೆಗೆ ಇಚ್ಛಾಶಕ್ತಿಯಂತೆ ಕ್ರೀಡೆ, ಸಾಂಸ್ಕೃತಿಕ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಹೆಚ್ಚಿಸುವ ಕೆಲಸ ಮಾಡಬೇಕು. ಉನ್ನತ ಗುರಿ, ನಿಶ್ಚಿತ ದಾರಿ, ಪ್ರಯತ್ನಶೀಲ ಸುಗುಣಗಳನ್ನು ವಿದ್ಯಾರ್ಥಿಗಳಾದವರು ಬೆಳೆಸಿಕೊಂಡು ಮುನ್ನಡೆಯುವ ಅಗತ್ಯವಿದೆ ಎಂದರು.
ಕೆ.ಎಲ್.ಇ. ಸಂಸ್ಥೆಯ ಉಪಾಧ್ಯಕ್ಷ ಎಮ್. ಸಿ. ಕೊಳ್ಳಿ ಮಾತನಾಡಿ ವ್ಯಕ್ತಿಯ ಹುಟ್ಟಿನಿಂದ ಮರಣದವರೆಗೂ ಶಿಕ್ಷಣದ ಅವಶ್ಯಕತೆ ಇದೆ. ಅಂದಿನ ಗುರುಕುಲ ಮಾದರಿಯಿಂದ ಇಂದಿನ ಆನ್ಲೈನ್ ಶಿಕ್ಷಣದವರೆಗೂ ಹಲವಾರು ಕ್ರಮಗಳಲ್ಲಿ ಆದ ಪರಿವರ್ತನೆ ಮತ್ತು ಪರಿಣಾಮಕಾರಿ ಬೆಳವಣಿಗೆಯನ್ನು ನಾವುಗಳು ಇತಿಹಾಸದ ಪುಟಗಳಿಂದ ತಿಳಿಯುತ್ತೇವೆ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ. ಡಿ. ಶಿರೂರ ಮಾತನಾಡಿ ವಿದ್ಯಾರ್ಥಿಗಳಲ್ಲಿ ನೈತಿಕ ಬಲ, ಮಾನಸಿಕ ಬಲ, ದೈಹಿಕ ಸಾಮಥ್ರ್ಯಗಳು ಮೇಳೈಸಿದಾಗ ಜ್ಞಾನವೃದ್ಧಿಗೆ ಸಹಕಾರಿಯಾಗುತ್ತದೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್. ಸಿ. ಮೆಟಗುಡ್ಡ ಮಾತನಾಡಿ ಶಿಕ್ಷಣ ಕ್ರಾಂತಿಯನ್ನು ಮಾಡಿರುವ ಕೆ.ಎಲ್.ಇ. ಸಂಸ್ಥೆಯು ಆಧುನಿಕ ಜಗತ್ತಿನೊಟ್ಟಿಗೆ ಸವಾಲುಗಳನ್ನು ಎದುರಿಸಿ ಮಹತ್ತರ ಮೈಲುಗಲ್ಲುಗಳನ್ನು ತನ್ನದೇ ರೀತಿಯಲ್ಲಿ ನಿಲ್ಲಿಸಿರುವುದು ಹೆಮ್ಮೆಯ ವಿಷಯವಾಗಿದೆ. ಕೆ.ಎಲ್.ಇ. ಸಂಸ್ಥೆಯು ಭವಿಷ್ಯತ್ತಿನ ದಿನಮಾನಗಳಲ್ಲಿ ಇನ್ನೂ ಹಲವು ಯೋಗ್ಯ ಸಂಕಲ್ಪಗಳನ್ನು ಮಾಡಿದ್ದು ಬರುವ ವರ್ಷಗಳಲ್ಲಿ ಅವುಗಳನ್ನು ಸಾಕಾರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಎಸ್. ತಟವಟಿ, ಪ.ಪೂ. ಪ್ರಾಚಾರ್ಯ ಪ್ರೊ. ಜೆ. ಆರ್. ಶಿಂಧೆ, ಸಮಿತಿ ಸದಸ್ಯರಾದ ಬಸವರಾಜ ಮಾಸೂರ, ಸಿ. ಬಿ. ಹಿರೇಮಠ, ಜಯಣ್ಣ ಅರಣಿ, ಡಾ|. ಬಿ. ಸಿ. ಬನ್ನೂರ ಉಪಸ್ಥಿತರಿದ್ದರು.
ವಿದ್ಯಾ ಹೆಗಡೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಎಮ್. ಎಸ್. ಯರಗೊಪ್ಪ ಸ್ವಾಗತಿಸಿದರು. ಪ್ರೊ. ಡಿ. ಎ. ಕೊಲ್ಲಾಪುರೆ ಪರಿಚಯಿಸಿದರು. ಪ್ರೊ. ಎಸ್. ಜಿ. ಹುಣಸಿಕಟ್ಟಿಮಠ ನಿರ್ವಹಿಸಿದರು. ಡಾ. ವಾಸುದೇವ ನಾಯಕ ವಂದಿಸಿದರು.