ಬೆಂಗಳೂರು, ಏ.10,ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ರೈತರು ಬೆಳೆದಿದ್ದ ಫಸಲು ಕೈಗೆ ಬಂದರು ಬಾಯಿಗೆ ಬಾರದಂತಾಗಿದೆ.ಈಗಾಗಲೇ ಕೆಲ ರೈತರು ತಾವು ಬೆಳೆದಿದ್ದ ಹಣ್ಣು, ಬೆಳೆ ಸಾಗಾಟ ಮಾಡಲಾಗದೇ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು, ಕೆಲವರು ಹಣ್ಣು,ಹಾಲು, ತರಕಾರಿ, ಬೆಳೆಯನ್ನು ರಸ್ತೆಗೆ ಎಸಿದಿದ್ದಾರೆ.ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರ ಬೆನ್ನಿಗೆ ನಿಲ್ಲುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಡಿನ ಜನರನ್ನು ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ, ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೇ ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ. ಅವರಿಗೆ ದಕ್ಕಬೇಕಾದ ಹಣವು ಅವರ ಪಾಲೇ ಆಗಲಿ ಅನ್ನೋದು ನನ್ನ ಆಶಯ ಎಂದು ಅವರು ಬರೆದುಕೊಂಡಿದ್ದಾರೆ.