ವಚನ ಸಾಹಿತ್ಯದ ಮೌಲ್ಯಗಳನ್ನು ಜಗತ್ತಿಗೆ ನೀಡಿದ ಮಹಾನ ವ್ಯಕ್ತಿ ಡಾ. ಹಳಕಟ್ಟಿ: ಬಿ.ಎಸ್‌.ಗಂಗನಹಳ್ಳಿ

ವಚನ ಸಾಹಿತ್ಯದ ಮೌಲ್ಯಗಳನ್ನು ಜಗತ್ತಿಗೆ ನೀಡಿದ ಮಹಾನ ವ್ಯಕ್ತಿ ಡಾ. ಹಳಕಟ್ಟಿ: ಬಿ.ಎಸ್‌.ಗಂಗನಹಳ್ಳಿ The great person who gave the world the values of Vachana Sahitya Dr. Halakatti: BS Ganganahalli

ಬೆಳಗಾವಿ 02:  ನಶಿಸಿ ಹೊಗುತ್ತಿದ್ದಂತಹ ವಚನಗಳ ಕಟ್ಟುಗಳನ್ನು ಹುಡುಕಿ ಅವುಗಳನ್ನು ಮುದ್ರಿಸಿ ಪುಸ್ತಕದಲ್ಲಿ ಪ್ರಕಟಣೆ ಮಾಡುವದರ ಮೂಲಕ ವಚನ, ಸಾಹಿತ್ಯದ ಮೌಲ್ಯಗಳನ್ನು ಜಗತ್ತಿಗೆ ಕೊಟ್ಟಂತಹ ಮಹಾನ ವ್ಯಕ್ತಿ ಡಾ. ಫ.ಗು. ಹಳಕಟ್ಟಿಯವರು ಎಂದು ಬಿ.ಎಸ್‌.ಗಂಗನಹಳ್ಳಿ ಅವರು ನುಡಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ  ಬುಧವಾರ (ಜು.02) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಡಾ. ಫ.ಗು.ಹಳಕಟ್ಟಿಯವರ ಜನ್ಮ ದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಡಾ.ಫ.ಗು ಹಳಕಟ್ಟಿ ಅವರು ವಚನಗಳ ಮೌಲ್ಯವನ್ನು ಜಗತ್ತಿಗೆ ಸಾರಬೇಕು ಎಂಬ ದ್ಯೇಯೊದ್ಧೇಶದೊಂದಿಗೆ ಬೆಳಗಾವಿಯ ಚೌಗಲೆ ಅವರ ಮುದ್ರಣಾಲಯದಲ್ಲಿ ತಮ್ಮ ಮೊದಲ ಗ್ರಂಥಗಳನ್ನು ಮುದ್ರಿಸಿ ಪ್ರಕಟಿಸಿ ಶ್ರೀಮಂತ ಶರಣ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸುತ್ತಾರೆ. ವಕೀಲ ವೃತ್ತಿಯೊಂದಿಗೆ  1000 ಕಟ್ಟುಗಳನ್ನು ಸಂಗ್ರಹಿಸಿ, 250 ವಚನಕಾರರ ಬಗ್ಗೆ ತಿಳಿಸಿಕೊಟ್ಟಿದ್ದಾರೆ, 42 ರಗಳೆಗಳನ್ನು ಪ್ರಕಟಿಸಿಸುವದರ ಮೂಲಕ ವಚನಗಳನ್ನು ಜನ ಸಾಮಾನ್ಯರಿಗೆ ತಲುಪಿಸಿದ್ದಾರೆ.  

ವಿಜಯಪುರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದ ಅವರು ಕನ್ನಡದ ಉಳಿವಿಗಾಗಿ ಬಹಳಷ್ಟು ಶ್ರಮ ವಹಿಸಿ ವಿವಿಧ ಸಂಘ- ಸಂಸ್ಥೆಗಳನ್ನು ಕಟ್ಟಿ ಹಲವಾರು ಜನರಿಗೆ ಉದ್ಯೋಗ ಕೊಟ್ಟಂತವರು. ವಚನ ಸಾಹಿತ್ಯದ ಸಂರಕ್ಷಣೆ ಸಲುವಾಗಿ ತಾವು ವಾಸವಿರುವ ಮನೆಯನ್ನು ಮಾರಿ, ಕಷ್ಟಕರ ಸಮಯದಲ್ಲಿ ದೃತಿಗೆಡದೆ ವಚನ ಸಾಹಿತ್ಯವನ್ನು ಸಂರಕ್ಷಿಸಿದವರು. ಹಿತಚಿಂತಕ ಎಂಬ ಮುದ್ರಣಾಲಯವನ್ನು ಸ್ಥಾಪಿಸಿ ವಚನ ಸಾಹಿತ್ಯಗಳನ್ನು ಪುಸ್ತಕಗಳಲ್ಲಿ ಮುದ್ರಿಸಿ ವಚನ ಸಾಹಿತ್ಯಗಳನ್ನು ರಕ್ಷಿಸಿ ಜನ ಮನ್ನನೆ ಪಡೆಯುತ್ತಾರೆ. ಡಾ. ಫ.ಗು. ಹಳಕಟ್ಟಿಯವರಿಗೆ ಸಾಹಿತಿಗಳಾದ ಸಿಂಪಿ ಲಿಂಗಣ್ಣನವರು ಕರ್ನಾಟಕದ ಮ್ಯಾಕ್ಸಮುಲ್ಲರ ಎಂದು ಕರೆದಿದ್ದಾರೆ ಎಂದು ಗಂಗನಹಳ್ಳಿಯವರು ತಿಳಿಸಿದರು.  

ವಚನ ಸಾಹಿತ್ಯಗಳನ್ನು ಮೊದಲಬಾರಿಗೆ ಇಂಗ್ಲಿಷ್‌ಗೆ ಭಾಷಾಂತರಿಸಿ ಮುದ್ರಿಸಿದವರು ಡಾ. ಫ.ಗು. ಹಳಕಟ್ಟಿಯವರು. ತಮ್ಮ ಮುದ್ರಣಾಲಯದ ನೌಕರರನ್ನು ಕೆಲಸಗಾರರೆಂದು ಗುರತಿಸದೆ,  ತಮ್ಮ ಮಕ್ಕಳು, ಅಣ್ಣ-ತಮ್ಮಂದಿರ ಹಾಗೆ ನೋಡಿಕೊಳ್ಳುತ್ತಿದ್ದಂತಹ ಮಹಾನ ಮಾನವಿಯ ಗುಣವುಳ್ಳ ವ್ಯಕ್ತಿತ್ವ ಅವರದ್ದು. ತಮ್ಮ ಸೇವೆಯಿಂದ ಗುರುತಿಸಿಕೊಂಡ ಅವರ ಹೆಸರು ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿದೆ ಎಂದು ಪ್ರಾಧ್ಯಾಪಕರಾದ ಡಾ. ಬಿ.ಎಸ್‌. ಗಂಗನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡಿದರು. 

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ ಅವರು ಮಾತನಾಡಿ 12ನೇ ಶತಮಾನದಲ್ಲಿ ಬಸವಾದಿ ಶಿವ-ಶರಣರು ಕನ್ನಡದಲ್ಲಿ ವಚನ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸಿದ್ದರು, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತ ವಚನ ಸಾಹಿತ್ಯವನ್ನು ಜನರಿಗೆ ಕೊಟ್ಟವರು.  ವಚನ ಸಾಹಿತ್ಯಗಳನ್ನು ತಿಳಿದುಕೊಂಡು ಜೀವನ ನಡೆಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ನಗರ ಸೇವಕ ಮುಸ್ತಾಕ ಮುಲ್ಲಾ, ಗಣ್ಯರಾದ ಮುರಗೇಶ ಶಿವಫೂಜಿ, ಬಸವರಾಜ ರೊಟ್ಟಿ, ರಾಜಶೇಖರ ಖೋತ, ಆಶಾ ಚನ್ನನವರ, ಸಿ.ಎಮ್‌. ಬೂದಿಹಾಳ, ಎ.ವಾಯ್‌.ಬೆಂಡಿಗೇರಿ, ಮೋಹನ ಗುಂಡ್ಲೂರ ಹಾಗೂ ಮತ್ತಿತರು ಉಪಸ್ಥಿತರಿದ್ದರು.