ಮಂತ್ರಾಲಯದಲ್ಲಿ ವೈಭವದ ಮಧ್ಯಾರಾಧನೆ: ರಾಯರ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

ರಾಯಚೂರು: ಯತಿ ಶ್ರೇಷ್ಠ ಮಂತ್ರಾಲಯದ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ 347ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಮಧ್ಯಾರಾಧನೆ ವೈಭವದಿಂದ ನೆರವೇರುತ್ತಿದೆ.  

ಇಂದು ಬೆಳಿಗ್ಗೆ ಶ್ರೀ ಗುರುರಾಜರ ಮಧ್ಯರಾಧನೆ ಪ್ರಯುಕ್ತ ಶ್ರೀ ರಾಯರ ಪಾದಪೂಜೆ ಮತ್ತು ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಮತ್ತು ಹಲವು ಪುಷ್ಪಗಳಿಂದ ಅಲಂಕಾರ ಪೂಜೆ ಮಾಡಲಾಯಿತು.  

ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಪೂಜಾಮಂದಿರದಲ್ಲಿ ಚಿನ್ನದ ಮಂಟಪದಲ್ಲಿ ಶ್ರೀ ಮೂಲ ರಾಘುಪತಿ ವೇದವಾಸ್ಯರ ಪೂಜೆ, ಅಲಂಕಾರ ಸಂತರ್ಪಣೆ, ಅಸ್ತೋದಕ, ಮಹಾಮಂಗಳಾರತಿ ಸೇವೆ ನೆರವೇರಿಸಿದರು.  

ಬೆಳಗಿನ ಜಾವದಿಂದಲೇ ಪೂಜಾ ವಿಧಿವಿಧಾನವನ್ನು ನಡೆಸಲಾಗುತ್ತಿದ್ದು, ಅಪಾರ ಸಂಖ್ಯೆಯ ಭಕ್ತರ ಮಧ್ಯೆ ನವರತ್ನ ಖಚಿತ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.ರಾಜ್ಯದಲ್ಲಿ ಉತ್ತಮ ಮಳೆಯಾಗಿರು ಹಿನ್ನಲೆಯಲ್ಲಿ ತುಂಗಭದ್ರಾ ನದಿ ಹರಿವು ಉತ್ತಮವಾಗಿದ್ದು, ಭಕ್ತರ ಪುಣ್ಯ ಸ್ನಾನಕ್ಕೆ ಅನುಕೂಲವಾಗಿದೆ.  

ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿದ್ದು, ರಾಯರ ಮೂಲ ವೃಂದಾವನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ನಿನ್ನೆಯಷ್ಟೇ ಪೂವರ್ಾರಾಧನಾ ಮಹೋತ್ಸವವನ್ನು ವೈಭವದಿಂದ ನಡೆಸಲಾಗಿತ್ತು. ಇಂದು ಮಧ್ಯಾರಾಧನೆ ನಡೆಯುತ್ತಿದ್ದು, ನಾಳೆ (ಬುಧವಾರ) ಉತ್ತರಾರಾಧನೆ ನಡೆಯಲಿದೆ.