ಸೌಹಾರ್ದತೆಯ ಸಂಭ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಕರೆ

ಸೌಹಾರ್ದತೆಯ ಸಂಭ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಕರೆ The grand fair of Gramdevi after 44 years:

44 ವರ್ಷಗಳ ಬಳಿಕ ಗ್ರಾಮದೇವಿಯ ಭವ್ಯ ಜಾತ್ರೆ:  

ಸವದತ್ತಿ 29: ಗ್ರಾಮದೇವಿಯ ಜಾತ್ರೆಯು ಕೇವಲ ಒಂದು ಹಬ್ಬವಲ್ಲ, ಅದು ನಮ್ಮೆಲ್ಲರ ಸೌಹಾರ್ದತೆಯ ಸಂಕೇತ. ಸುಮಾರು 44 ವರ್ಷಗಳ ಸುದೀರ್ಘ ಅಂತರದ ನಂತರ ನಡೆಯುತ್ತಿರುವ ಈ ವೈಭವದ ಜಾತ್ರೆಯನ್ನು ಜಾತಿ-ಧರ್ಮದ ಭೇದ ಮರೆತು ನಾವೆಲ್ಲರೂ ಒಗ್ಗಟ್ಟಾಗಿ ಸಂಭ್ರಮಿಸೋಣ, ಎಂದು ಶಾಸಕ ವಿಶ್ವಾಸ ವೈದ್ಯ ಅವರು ಕರೆ ನೀಡಿದರು.

ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಗ್ರಾಮದೇವಿಯ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಈ ಐತಿಹಾಸಿಕ ಕ್ಷಣಕ್ಕೆ ಇಡೀ ಸವದತ್ತಿ ಜನತೆ ಕಾತುರದಿಂದ ಕಾಯುತ್ತಿದ್ದು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸೋಣ ಎಂದರು. ರಾಮದುರ್ಗ ಡಿವೈಎಸ್ಪ ಚಿದಂಬರ ಮಡಿವಾಳರ ಮಾತನಾಡಿದ ಅವರು ಭಾವನಾತ್ಮಕವಾಗಿ ನಾನು ಇದೇ ಸವದತ್ತಿಯ ಮಣ್ಣಿನಲ್ಲಿ ಹುಟ್ಟಿ ಬೆಳೆದವನು. ಉದ್ಯೋಗದ ನಿಮಿತ್ತ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿರಬಹುದು, ಆದರೆ ನಮ್ಮೂರಿನಲ್ಲಿ ಸಿಗುವ ಸಂತೋಷ ಮತ್ತು ನೆಮ್ಮದಿ ಬೇರೆಲ್ಲೂ ಸಿಗುವುದಿಲ್ಲ. ಇಲ್ಲಿ ನಾನು ಕೇವಲ ಪೊಲೀಸ್ ಅಧಿಕಾರಿಯಾಗಿ ಮಾತ್ರವಲ್ಲದೆ, ಗ್ರಾಮದೇವಿಯ ಭಕ್ತನಾಗಿಯೂ ಸೇವೆ ಸಲ್ಲಿಸುತ್ತಿದ್ದೇನೆ, ಎಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಜಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಭದ್ರತೆಗಾಗಿ 50ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಅಳವಡಿಕೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಡ್ರೋನ್ ಕ್ಯಾಮರಾಗಳ ಮೂಲಕ ನಿಗಾ ಇರಿಸಲಾಗುವುದು. ವಾಹನ ದಟ್ಟಣೆ ತಪ್ಪಿಸಲು ಕರೀಕಟ್ಟಿ ರಸ್ತೆ ಮಾರ್ಗದ ರೈತ ಸಂಪರ್ಕ ಕೇಂದ್ರದ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಿರಂತರ ಪೆಟ್ರೋಲಿಂಗ್ ಗಸ್ತು ಇರಲಿದೆ. ಅಲ್ಲದೆ, ವೃದ್ಧರು ಮತ್ತು ಹಿರಿಯ ನಾಗರಿಕರು ಸುಲಭವಾಗಿ ಓಡಾಡಲು ಅನುವಾಗುವಂತೆ ಪ್ರತ್ಯೇಕ ವಾಹನ ಸೌಕರ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.ಜಾತ್ರಾ ಸಮಿತಿಯ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಮೇ 4 ರಂದು ಗ್ರಾಮದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ. ಅಂದು ಬೆಳಿಗ್ಗೆ ಎಪಿಎಂಸಿ ಸರ್ಕಲ್‌ನಿಂದ ಕುಂಭ ಆರತಿ ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಭವ್ಯ ಮೆರವಣಿಗೆ ಹೊರಡಲಿದೆ. ನಗರದ 65 ಓಣಿಗಳ ಮಹಿಳೆಯರು ಬೆಳಿಗ್ಗೆ 6 ಗಂಟೆಗೆ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಬೇಕು, ಎಂದು ಮನವಿ ಮಾಡಿದರು.  

ಪಿಎಸ್‌ಐ ಕೆಲ್ಲ್ಮಶ ಬನ್ನೂರ, ಅಲ್ಲಮಪ್ರಭು ಪ್ರಭುನವರ, ಸದಾಶಿವ ಕೌಜಲಗಿ,ಶಿವಾನಂದ ಹೂಗಾರ,ಮದನಲಾಲ ಚೋಪ್ರಾ, ಭರಮಪ್ಪ ಅಣಿಗೇರಿ, ಡಾ.ವೈ.ಎಂ.ಯಾಕ್ಕೊಳ್ಳಿ ಎನ್‌.ಸಿ.ಬೆಂಡಿಗೇರಿ,ಇನ್ನೂ ಅನೇಕರು ಉಪಸ್ಥಿತರಿದ್ದರು.