ಸುಸ್ಥಿರ ಕೃಷಿ ಹಾಗೂ ಪರಿಸರ ಕಾಳಜಿಯಿಂದ ಮಾತ್ರ ಭವಿಷ್ಯ ಸುಭದ್ರ: ಡಾ. ಚನ್ನಪ್ಪ ಅಂಗಡಿ
The future is secure only through sustainable agriculture and environmental concern: Dr. Channappa A
ಲೋಕದರ್ಶನ ವರದಿ
ಧಾರವಾಡ 29: ವೈಯಕ್ತಿಕ ಹಾಗೂ ಕೌಟುಂಬಿಕ ನೆಲೆಯಲ್ಲಿ ಸಾಧಿಸಬೇಕಾದ ಪ್ರಮುಖ ಗುರಿ ಸುಸ್ಥಿರತೆಯಾಗಿದ್ದು, ಮನುಷ್ಯನ ಮನಸ್ಸಿನಲ್ಲಿ ಆಳವಾಗಿ ಹಾಗೂ ಭದ್ರವಾಗಿ ಬೇರೂರುವುದೇ ಸುಸ್ಥಿರ ಕೃಷಿಗೆ ಪೂರಕವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹಾಗೂ ಸಾಹಿತಿ ಡಾ. ಚನ್ನಪ್ಪ ಅಂಗಡಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕೃಷಿ ಹಾಗೂ ಪರಿಸರ ಮಂಟಪದ ವತಿಯಿಂದ ಆ. 28ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸುಸ್ಥಿರ ಕೃಷಿ ಮತ್ತು ಪರಿಸರ ಕಾಳಜಿ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಮಾತನಾಡಿದರು.
ಪಂಪನ ಕಾವ್ಯದಲ್ಲಿ ಕೃಷಿಯನ್ನೇ ನಂಬಿ ಬದುಕಿದವರ ಉಲ್ಲೇಖವಿದ್ದು, ‘ಕೃಷಿಯಿಲ್ಲದೆ ಬದುಕಿಲ್ಲ’ ಎಂಬ ಸಂದೇಶವೂ ಕಾಣುತ್ತದೆ. ಹಿಂದೆ ಭತ್ತ, ಜೋಳ ಸೇರಿದಂತೆ ದ್ವಿದಳ ಧಾನ್ಯಗಳ ಒಂದು ಲಕ್ಷಕ್ಕೂ ಅಧಿಕ ತಳಿಗಳಿದ್ದವು.
ಆದರೆ ಇಂದು ಸಾಂಪ್ರದಾಯಿಕ ಕೃಷಿ ಪದ್ಧತಿಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಅಡಿಕೆ, ಸೋಯಾ, ಗೋವಿನಜೋಳ ಮತ್ತಿತರ ಏಕಬೆಳೆಗಳತ್ತ ರೈತರು ಹೆಚ್ಚು ಅವಲಂಬಿತರಾಗಿದ್ದಾರೆ. ಹಣದ ಆಸೆ ಹಾಗೂ ಅಪಾಯಕಾರಿ ಕೃಷಿ ಪದ್ಧತಿಗಳ ಬೆನ್ನತ್ತಿರುವುದು ಕೃಷಿಯ ಸುಸ್ಥಿರತೆಗೆ ಧಕ್ಕೆ ತರುತ್ತಿದೆ ಎಂದು ಅವರು ಹೇಳಿದರು.
ನಾವು ಸೇವಿಸುವ ಆಹಾರ ಪೋಷಕಾಂಶಗಳಿಂದ ಕೂಡಿರಬೇಕು. ನಮ್ಮ ಪ್ರದೇಶದ ಸುತ್ತಮುತ್ತ ಬೆಳೆಯುವ ಹಣ್ಣು, ಹಂಪಲು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಉತ್ತರ ಭಾರತದಲ್ಲಿ ಬೆಳೆಯುವ ಹಣ್ಣು, ತರಕಾರಿಗಳನ್ನು ರಾಸಾಯನಿಕ ದ್ರಾವಣಗಳಲ್ಲಿ ಸಂಸ್ಕರಿಸಿ ಮಾರುಕಟ್ಟೆಗೆ ತಂದು ಸೇವಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಜೀವನಶೈಲಿ ಬದಲಾಗುತ್ತಿದ್ದು, ಅನಾರೋಗ್ಯಕರ ಜೀವನಶೈಲಿಯತ್ತ ನಾವು ಹೆಜ್ಜೆ ಹಾಕುತ್ತಿದ್ದೇವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಮ್ಮ ಮೂಲ ತಳಿಗಳಾದ ಜೋಳ, ಸಿರಿಧಾನ್ಯಗಳು, ಅವಿಭಕ್ತ ಕುಟುಂಬ ಪದ್ಧತಿ ಹಾಗೂ ಧಾನ್ಯಗಳ ರಾಶಿಗಳು ಸುಸ್ಥಿರ ಕೃಷಿಯ ಸಂಕೇತಗಳಾಗಿವೆ. ಆದರೆ ಪ್ರಸ್ತುತ ಕೃಷಿ ವ್ಯವಸ್ಥೆ ಅಸ್ಥಿರತೆಯತ್ತ ಸಾಗುತ್ತಿದೆ ಎಂದು ಡಾ. ಚನ್ನಪ್ಪ ಅಂಗಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಸರವಾದಿ ಹಾಗೂ ಇಕೋ ವಿಲೇಜ್ ಸಂಸ್ಥಾಪಕ ಪಿ.ವಿ. ಹಿರೇಮಠ ಮಾತನಾಡಿ, ಪರಿಸರ ನಾಶದಿಂದ ನೈಸರ್ಗಿಕ ವಿಕೋಪಗಳು, ತಾಪಮಾನದ ಹೆಚ್ಚಳ ಹಾಗೂ ಹಿಮಗಡ್ಡೆಗಳ ಕರಗುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಇವುಗಳಿಂದಾಗಿ ಪ್ರತಿವರ್ಷ ಭಾರತದಲ್ಲಿ ಲಕ್ಷಾಂತರ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದರು.
ಪರಿಸರದಲ್ಲಿ ಕೀಟಗಳು, ಪಕ್ಷಿಗಳು ಹಾಗೂ ಕಾಡುಪ್ರಾಣಿಗಳು ಇಲ್ಲದಿದ್ದರೆ ಕೃಷಿ ಯಶಸ್ವಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ನಾಶ ಮಾಡದೆ ಅದರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ನಂತರ ಸಭಿಕರೊಂದಿಗೆ ಸಂವಾದ ನಡೆಯಿತು. ಉದ್ಯಮಿ ಶಶಿಭೂಷಣ ದೊಡ್ಡವಾಡ ವೇದಿಕೆಯಲ್ಲಿ ಗೌರವ ಉಪಸ್ಥಿತರಿದ್ದರು. ಜಯಶ್ರೀ ಗವಳಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಹಾಗೂ ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಮತ್ತು ಪರಿಸರ ಮಂಟಪದ ಸಂಚಾಲಕ ಗುರು ಹಿರೇಮಠ ನಿರೂಪಿಸಿದರು. ಸಿದ್ದು ಕಂಬಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ. ಧನ್ವಂತ ಹಾಜವಗೋಳ, ಡಾ. ರಾಜೇಂದ್ರ ಪೊದ್ದಾರ, ಪ್ರೊ. ಬಿ.ವಿ. ಶಿರೋಳ, ಡಾ. ಲಿಂಗರಾಜ ಅಂಗಡಿ, ಚಂದ್ರಶೇಖರ ನಾಗಶೆಟ್ಟಿ, ಮಲ್ಲಿಕಾರ್ಜುನ ಸೊಲಗಿ, ಮಹಾಂತೇಶ ನರೇಗಲ್ಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 