ಅಸ್ಸಾಂನಲ್ಲಿ ಕೊರೊನಾ ಸೋಂಕಿನ ಮೊದಲ ಸಾವು

ಗುವಾಹಟಿ, ಏ 10, ಅಸ್ಸಾಂನಲ್ಲಿ ಶುಕ್ರವಾರ ಬೆಳಗಿನ ಜಾವ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಹೈಲಕಂಡಿ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿ ಸಿಲ್ಚಾರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ ದೃಢಪಡಿಸಿದ್ದಾರೆ. 65 ವರ್ಷದ ಮೃತ ವ್ಯಕ್ತಿಯಲ್ಲಿ ರಾತ್ರಿ 2 ಗಂಟೆ ಸಮಯದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಉಲ್ಬಣವಾಗಿತ್ತು ಎಂದು ಅವರು ತಿಳಿಸಿದರು. ಮೃತ ವ್ಯಕ್ತಿ ಸೌದಿ ಅರೇಬಿಯಾಗೆ ಪ್ರಯಾಣಿಸಿದ್ದು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಾಜ್ ನಲ್ಲಿ ಕೂಡ ಭಾಗವಹಿಸಿದ್ದರು ಎನ್ನಲಾಗಿದೆ. ಅವರಲ್ಲಿ ಏಪ್ರಿಲ್ 7 ರಂದು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರಿಗೆ ಅಂದಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಗುರುವಾರ ರಾತ್ರಿ ಸೋಂಕಿನ ಲಕ್ಷಣಗಳು ಉಲ್ಬಣವಾಗಿದೆ. ಅಸ್ಸಾಂನಲ್ಲಿ ಈವರೆಗೆ 29 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.