ಬೆಳಗಾವಿ, ಅ 13: ಸರ್ಕಾರದ ಸೌಲಭ್ಯಗಳನ್ನುಪಡೆದುಕೊಂಡು ಸ್ವಾವಲಂಬನೆ ಸಾಧಿಸಿದಾಗ ಜಯಂತಿಗಳು ಸಾರ್ಥಕವಾಗುತ್ತದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಒಂದು ಹಂತದವರೆಗೆ ಸಹಾಯ-ಸಹಕಾರ ನೀಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡು ಸಾರ್ಥಕ ಜೀವನ ಕಂಡುಕೊಳ್ಳಬಹುದು ಎಂದರು.
ರಾಮಾಯಣ ಮಹಾಕಾವ್ಯದ ಅನೇಕ ಬಗೆಯ ರಾಮಾಯಣ ಕೃತಿಗಳು ಹೊರಬರುತ್ತಿರುವುದ್ದು ಮೂಲ ವಾಲ್ಮೀಕಿ ರಾಮಾಯಣದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಹಾರ ಪದ್ಧತಿ, ವ್ಯಕ್ತಿಯ ಬಣ್ಣ-ರೂಪಗಳ ಮೇಲೆ ತಾರತಮ್ಯ ನಡೆಯುತ್ತಿದೆ. ಅಷ್ಟೇ ಏಕೆ ದೇವರುಗಳಲ್ಲೂ ತಾರತಮ್ಯ ಮಾಡಲಾಗುತ್ತಿದ್ದು, ಕೆಲವು ಉಗ್ರ ದೇವರುಗಳು; ಇನ್ನು ಕೆಲವು ದೇವರುಗಳಿವೆ. ಈ ತಾರತಮ್ಯ ನಿವಾರಿಸಬೇಕಾದ ಅಗತ್ಯವಿದೆ ಎಂದರು.
ಶಿಕ್ಷಣ, ಸಂಘಟನೆ, ಹೋರಾಟ ಎಂದು ಡಾ.ಅಂಬೇಡ್ಕರ್ ಹೇಳಿದರು. ಅದಕ್ಕೆ ಈಗ 'ಉದ್ಯೋಗ' ಎಂಬ ಪದವನ್ನೂ ಸೇರಿಸಬೇಕಿದೆ. ವಾಲ್ಮೀಕಿ ಸಮಾಜಕ್ಕೆ ಉದ್ಯೋಗ-ಶಿಕ್ಷಣದಲ್ಲಿ ಶೇ.7.5 ರಷ್ಟು ಮೀಸಲಾತಿ ಅಗತ್ಯವಿದೆ. ಇದನ್ನು ಪಡೆಯುವ ನಿಟ್ಟಿನಲ್ಲಿ ವಾಲ್ಮೀಕಿ ಗುರುಪೀಠದ ನೇತೃತ್ವದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಧಾರವಾಡ ಕರ್ನಾಟಕ ಕಾಲೇಜಿನ ಡಾ.ಶರಣು ಮುಷ್ಠಿಗೇರಿ, ಜಗತ್ತಿನ ಮಹಾನ್ ಆದರ್ಶ ಗ್ರಂಥಗಳಾಗಿರುವ ರಾಮಾಯಣ-ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು ಎಂದರು.
ವಾಲ್ಮೀಕಿ ಆದರ್ಶಗಳು ಮತ್ತು ಬದುಕು ಇಂದಿನ ಅರಿವಿನ ಮಾರ್ಗಗಳಾಗಿವೆ. ಒಂದು ವಾಲ್ಮೀಕಿ ರಾಮಾಯಣ ಇಂದು ಅರವತ್ತು ಸಾವಿರ ರಾಮಾಯಣಗಳಾದರೂ ಮೂಲ ಗ್ರಂಥ ವಾಲ್ಮೀಕಿ ರಾಮಾಯಣವೇ ಆಗಿ ಉಳಿದಿರುವುದಕ್ಕೆ ಅದರ ಸತ್ವವೇ ಕಾರಣವಾಗಿದೆ ಎಂದು ನುಡಿದರು.
ಸಹೋದರ ಬಾಂಧವ್ಯ, ಬಂಧು ಬಾಂಧವರು ಅಲ್ಲದೇ ರಾಜ-ಮಹಾರಾಜರು, ಋಷಿಮುನಿಗಳು, ಆಡಳಿತ ವ್ಯವಸ್ಥೆ ಮೊದಲಾದವು ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟ ಆದರ್ಶ ಕೃತಿ ರಾಮಾಯಣ. ಅಂತಹ ಮಹಾನ್ ಕೃತಿ ಜಗತ್ತಿಗೆ ಕೊಟ್ಟ ವಾಲ್ಮೀಕಿ ಆದರ್ಶಪ್ರಾಯರಾಗಿದ್ದಾರೆ ಎಂದರು.
ವಾಲ್ಮೀಕಿಯ ಆದರ್ಶ ರಾಮಾಯಣ ವಿದ್ಯಾರ್ಥಿಗಳಿಗೆ ಪಠ್ಯವಾಗಬೇಕಿದ್ದು, ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಆರಂಭಿಸುವ ಮೂಲಕ ಮಹಾನ್ ಗ್ರಂಥ ಮತ್ತು ವಾಲ್ಮೀಕಿಯ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡಬೇಕಿದೆ ಎಂದು ಡಾ.ಶರಣು ಮುಷ್ಠಿಗೇರಿ ಅಭಿಪ್ರಾಯಪಟ್ಟರು.
ಬಳಿಕ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಮಾತನಾಡಿ, ಮಹಾನ್ ಗ್ರಂಥ ರಾಮಾಯಣದ ಮೂಲಕ ಜಗತ್ತಿಗೆ ಆದರ್ಶ ರಾಮರಾಜ್ಯದ ಕನಸು ಕಟ್ಟಿಕೊಟ್ಟ ವಾಲ್ಮೀಕಿ ಸದಾ ಸ್ಮರಣಾರ್ಹರು ಎಂದು ಹೇಳಿದರು.
ಶಾಸಕ ಅನಿಲ್ ಬೆನಕೆ ಮಾತನಾಡಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಯು ಆಯಾ ಸಮಾಜದ ನಿಜವಾದ ಪ್ರಗತಿಯಾಗಿದೆ ಎಂದರು.ಹಿಂಡಾಲ್ಕೊ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನಗರದ ಅಶೋಕ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಚಾಲನೆ ನೀಡಿದರು. ಮೆರವಣಿಗೆ ಆರ್ಟಿ.ಓ. ವೃತ್ತದ ಮೂಲಕ ಕುಮಾರ ಗಂಧರ್ವ ರಂಗಮಂದಿರ ತಲುಪಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಅರುಣ ಕಟಾಂಬಳೆ, ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್., ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ ಬಡಿಗೇರ, ತಾಲೂಕ ಪಂಚಾಯತ್ ಉಪಾಧ್ಯಕ್ಷ ಮಾರುತಿ ಸನದಿ, ಮಾಜಿ ನಗರ ಸೇವಕಿ ಜಯಶ್ರೀ ಮಾಲಗಿ, ಎಪಿಎಂಸಿ ಅಧ್ಯಕ್ಷ ಆನಂದ ಪಾಟೀಲ, ಮಾಜಿ ಪೌರ ಬಸಪ್ಪ ಚಿಕ್ಕಲದಿನ್ನಿ, ಸ್ಥಾಯಿ ಸಮಿತಿಯ ಅಧ್ಯಕ್ಷ ರಮೇಶ್ ಗೋರಲ್, ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.