ಬೆಂಗಳೂರು, ಮೇ 3,ನಿತ್ಯೋತ್ಸವ ಕವಿ ಎಂದೇ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ಕವಿ, ಸಾಹಿತಿ, ಬರಹಗಾರ ಪ್ರೊ.ಕೆ.ಎಸ್. ನಿಸಾರ್ ಅಹ್ಮದ್ ಇಂದು ನಿಧನರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ನಗರದ ಪದ್ಮನಾಭನಗರದ ನಿವಾಸದಲ್ಲಿ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5, 1936 ರಲ್ಲಿ ಜನಿಸಿದ್ದರು. 1959ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, 1994ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು. ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ ಆರಂಭಗೊಂಡಿದ್ದು, 'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿಯಾಗಿದ್ದರು.1978ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು, ಗೀತೆಗಳು ಸಂಗೀತದೊಂದಿಗೆ ಪ್ರಚುರಗೊಂಡಿವೆ.ಕುರಿಗಳು ಸಾರ್ ಕುರಿಗಳು, ರಾಜಕೀಯ ವಿಡಂಬನೆ ಕವನ, ಭಾರತವು ನಮ್ಮ ದೇಶ (ಸರ್ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ), ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.ಅವರ ನಿಧನಕ್ಕೆ ನಾಡಿನ ಹಿರಿಯ ರಾಜಕಾರಣಿಗಳು, ಸಾಹಿತಿಗಳು ಕಂಬನಿ ಮಿಡಿದಿದ್ದಾರೆ.