ಕಾಲೇಜಿನ ವ್ಯವಸ್ಥೆಗೆ ನಿರ್ದೇಶಕಿ ಪ್ರೊ. ಶೋಭಾ ಪ್ರಶಂಸೆ

ಕಾಲೇಜಿನ ವ್ಯವಸ್ಥೆಗೆ ನಿರ್ದೇಶಕಿ ಪ್ರೊ. ಶೋಭಾ ಪ್ರಶಂಸೆ The director of the college system Prof. Shobha praise

ಲೋಕದರ್ಶನ ವರದಿ 

ಹುಲಕೋಟಿ 27 : ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಪ್ರೊ. ಶೋಭಾ ಜಿ. ಅವರು ಹುಲಕೋಟಿಯ ಕೆ.ಎಚ್‌. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ವಿವಿಧ ವಿಭಾಗಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ಸೌಲಭ್ಯಗಳನ್ನು ಪರೀಶೀಲಿಸಿ ಮಾತನಾಡುತ್ತ ಪ್ರಶಾಂತ ನೈಸರ್ಗಿಕ ವಾತಾವರಣದಲ್ಲಿ ನಿರ್ಮಾಣವಾಗಿರುವ ಕಾಲೇಜಿನ ಕಟ್ಟಡವು ವಿಶಿಷ್ಟ ಮತ್ತು ಆಕರ್ಷಕವಾಗಿದೆ ಎಂದು ಹೇಳಿದರು. ಕಾಲೇಜಿನ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಶಿಸ್ತು, ತರಗತಿ ಕೊಠಡಿಗಳ ವ್ಯವಸ್ಥೆ, ಗ್ರಂಥಾಲಯ ಮತ್ತು ಪ್ರಯೋಗಾಲಯಗಳ ಸೌಲಭ್ಯ, ಶುದ್ಧ ನೀರಿನ ಘಟಕ, ವಿಶಾಲ ಆಟದ ಮೈದಾನ, ಉದ್ಯಾನವನ, ವಿದ್ಯಾರ್ಥಿಗಳ ಓದು ಮತ್ತು ಊಟಕ್ಕೆ ನೈಸರ್ಗಿಕವಾಗಿ ನಿರ್ಮಿಸಿರುವ ಅಂಗಳಗಳನ್ನು ಗಮನಿಸಿದ ಅವರು ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು. 

ಪ್ರಾಂಶುಪಾಲೆ ಪ್ರೊ. ಸುಧಾ ಕೌಜಗೇರಿ ನಿರ್ದೇಶಕಿ ಅವರನ್ನು ಸ್ವಾಗತಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳನ್ನು ಪರಿಚಯಿಸಿ ಕಾಲೇಜಿನ ಬೋಧಕರು ಮತ್ತು ವಿದ್ಯಾರ್ಥಿಗಳ ಸಾಧನೆಗಳು, ಪ್ರಗತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸುತ್ತ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕಾಲೇಜವು ಮಾದರಿ ಕಾಲೇಜುವಾಗಿದ್ದು, ಈ ಶೈಕ್ಷಣಿಕ ವರ್ಷದಿಂದ ಬಿಬಿಎ ಪದವಿ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ನಿರ್ದೇಶಕಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ, ತಮ್ಮ ಭೇಟಿ ಕಾಲೇಜಿನ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.