ಸಂಗೀತದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ : ಮಠಪತಿ

ಸಂಗೀತದಲ್ಲಿ ವಚನ ಸಾಹಿತ್ಯದ ಕೊಡುಗೆ ಅಪಾರ : ಮಠಪತಿ The contribution of Vachana literature to music is immense: Mathapati

ಬಾಗಲಕೋಟೆ 06: ವಚನ ಗಾಯನ ಶೈಲಿಯು 19ನೇ ಶತಮಾನದಲ್ಲಿ ಬೆಳಕಿಗೆ ಬಂದಿದ್ದು ಸಂಗೀತ ಕ್ಷೇತ್ರಕ್ಕೆ ಕನ್ನಡಿಗರು ನೀಡಿದ ಶ್ರೇಷ್ಠ ಕೊಡುಗೆಯಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯರಾದ ಪಂ.ಡಾ. ಎಸ್‌. ಆರ್ ಮಠಪತಿ ಅವರು ಹೇಳಿದರು. 

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಬೆಂಗಳೂರಿನ ಅಜಿಮ್ ಪ್ರೇಮ್ಜಿ ವಿವಿ ಸಹಯೋಗದಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ವಚನ ಗಾಯನ ಸ್ಪರ್ಧೆಯನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತದಲ್ಲಿ ಅನೇಕ ಪ್ರಕಾರಗಳಿವೆ ಅವುಗಳಲ್ಲಿ ಪಂಚಾಕ್ಷರಿ ಗವಾಯಿಗಳು ಹುಟ್ಟು ಹಾಕಿದ ವಚನ ಗಾಯನವು ಒಂದಾಗಿದೆ. 1906ರಲ್ಲಿ ಬಾಗಲಕೋಟೆಯ ತೆಗ್ಗಿನ ಮಠದಲ್ಲಿ ಅವರು ಹಾಡಿದ ವಚನ ಸಾಹಿತ್ಯ ಮೆಚ್ಚಿ ಹಾನಗಲ್ಲ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿ ಎಂಬ ನಾಮಕರಣ ಮಾಡುತ್ತಾರೆ. ಬಳಿಕ ಡಾ.ಮಲ್ಲಿಕಾರ್ಜುನ ಮನಸೂರ ಅವರು ದೂರದರ್ಶನದ ನೇರ ಪ್ರಸಾರದಲ್ಲಿ ವಚನಗಾಯನ ಮಾಡಿ ಅದನ್ನು ಮತ್ತಷ್ಟು ಪ್ರಚುರಪಡಿಸಿದ್ದು ವಚನ ಗಾಯನವು ಸಾಹಿತ್ಯದಲ್ಲಿ ಅನೇಕ ರೀತಿಯ ಬೆಳವಣಿಗೆಯನ್ನು ಕಂಡಿದೆ ಎಂದರು. 

ಪ್ರಸ್ತುತ ದೇಶದೆಲ್ಲೆಡೆ ವಚನವು ಸಂಗೀತ ಶೈಲಿಯಾಗಿ ಮಾರ​‍್ಪಟಟಿದ್ದು ಈಗಿನ ಸಂಗೀತ ಕಚೇರಿಗಳಲ್ಲಿ ಗಾಯನದ ಕೊನೆಯಲ್ಲಿ ವಚನದ ಮೂಲಕ ಅಂತ್ಯಗೊಳಿಸುವ ಪ್ರತೀತಿ ಬೆಳೆದಿದೆ. ಶಬ್ದ ಮತ್ತು ಅರ್ಥ ದೋಷವಾಗದಂತೆ ಹಾಡುವ ಅಭ್ಯಾಸವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಎಂದರು. 

ಪ್ರಾಚಾರ್ಯರಾದ ಎಸ್‌.ಆರ್ ಮೂಗನೂರಮಠ ಅವರು ಮಾತನಾಡಿ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ವಿಶಿಷ್ಟವಾದ ರಚನೆಯನ್ನು ವಚನಗಳು ಹೊಂದಿದ್ದು ಹತ್ತನೆ ಶತಮಾನಮದಲ್ಲಿಯೇ ವಚನಗಳ ರಚನೆ ಪ್ರಾರಂಭವಾದವು. ಅನುಭವ ಮಂಟಪ ಪ್ರಾರಂಭವಾದ ನಂತರ ಅವುಗಳು ವಿಶಿಷ್ಟ ರೂಪ ಪಡೆದವು. ಸಾಹಿತ್ಯ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ. ಸಂಗೀತ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟ ಕೀರ್ತಿ ರೇಡಿಯೋ ಮಾಧ್ಯಮಕ್ಕೆ ಸಲ್ಲುತ್ತದೆ. ವಚನಗಳು ಕನ್ನಡದ ವೈಶಿಷ್ಟ್ಯವಾಗಿದ್ದು ಅದನ್ನು ವಿದ್ಯಾರ್ಥಿಗಳ ಮಟ್ಟದಲ್ಲಿ ಪ್ರಚಾರಮಾಡಲು ಇಂತಹ ಸ್ಪರ್ಧೆ ಏರಿ​‍್ಡಸಿರುವುದು ಸಂತಸದ ಸಂಗತಿ ಎಂದರು. 

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಡಾ.ಕೆ.ವಿ ಮಠ, ಪ್ರಾಧ್ಯಾಪಕರುಗಳಾದ ಡಾ.ಎಸ್‌.ಡಿ ಕೆಂಗಲಗುತ್ತಿ, ಡಾ.ಆರ್‌.ಎಮ್ ಬೆಣ್ಣೂರ ಸೇರಿದಂತೆ, ವಚನಗಾಯನ ಸ್ಪರ್ಧಾರ್ಥಿಗಳು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. 

ನಾದಮಯಗೊಂಡ ವಚನಗಾಯನ: ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ವಚನಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯ ಬಾದಾಮಿ, ಜಮಖಂಡಿ, ಮುಧೋಳ, ಇಳಕಲ್, ಮಹಾಲಿಂಗಪೂರ, ಲೋಕಾಪುರ ಸೇರಿದಂತೆ ವಿವಿಧ ಭಾಗದ 18 ಕಾಲೇಜುಗಳ 57 ವಿದ್ಯಾರ್ಥಿಗಳು ಪಾಲ್ಗೊಂಡು ವಚನವಾಚನ ಮಾಡಿದರು. ಪ್ರತಿ ಕಾಲೇಜಿನ 5 ಜನ ಸ್ಪರ್ಧಾರ್ಥಿಗಳು ಭಾಗಿಯಾಗಿದ್ದರು. ನಿರ್ಣಾಯಕರಾಗಿ ಪಂ.ಎಸ್‌.ಆರ್ ಮಠಪತಿ, ಡಾ.ಕೆ.ವಿ ಮಠ, ಡಾ.ಎಸ್‌.ಡಿ ಕೆಂಗಲಗುತ್ತಿ, ಡಾ.ಆರ್‌.ಎಮ್ ಬೆಣ್ಣೂರ ಪಾಲ್ಗೊಂಡಿದ್ದರು. ವಿಜೇತರ ಹೆಸರನ್ನು ಸೆ.13ರಂದು ಜರುಗಲಿರುವ ಸಾಹಿತ್ಯ ಸಹವಾಸ ವಿಚಾರ ಸಂಕೀರ್ಣದಲ್ಲಿ ಪ್ರಕಟಿಸಿ ಬಹುಮಾನ ವಿತರಣೆ ಮಾಡಲಾಗುವುದು.