ಕೃತಿ ರಚನೆ ಸರಳವಾದರೂ ವಿಮರ್ಶೆ ಮಾಡುವುದು ಕಷ್ಟಕರ.!!

ಕೃತಿ ರಚನೆ ಸರಳವಾದರೂ ವಿಮರ್ಶೆ ಮಾಡುವುದು ಕಷ್ಟಕರ.!!  The composition of the work is simple but the criticism is difficult.!!

"ಗೂಗಲ್ ಅಜ್ಜಿ" ಪುಸ್ತಕ ಬಿಡುಗಡೆ; "ಪುಟ್ಟು ಕುಲಕರ್ಣಿ"  

ರಾಣೆಬೆನ್ನೂರ 05 :  ಪುಸ್ತಕ, ಕೃತಿ ರಚನೆ ಮಾಡುವುದು  ಮೇಲ್ನೋಟಕ್ಕೆ ಸರಳವಾಗಿ ಕಂಡು ಬಂದರೂ ಸಹ ಅದನ್ನು ಬೇರೆಯವರು ವಿಮರ್ಶೆ ಮಾಡುವುದು, ಪರಿಚಯ ಮಾಡುವುದು ಬಹಳಷ್ಟು ಕ್ಲಿಷ್ಟಕರವಾದ ಸಂಗತಿ. ಜೊತೆಗೆ ಗುಡ್ಡಕ್ಕೆ ಕಲ್ಲು ಹೊತ್ತಂತಹ ಅನುಭವವಾಗುವುದು ಎಂದು ಅಖಿಲ ಭಾರತ ಪತ್ರಿಕೆಯ ಸಂಪಾದಕ, ಸಾಹಿತಿ, ಕವಿ, ವಿಮರ್ಶಕ  ಪುಟ್ಟು ಕುಲಕರ್ಣಿ ಹೇಳಿದರು.    

ರವಿವಾರದಂದು ಇಲ್ಲಿನ ಗೌರಿಶಂಕರ ನಗರದಲ್ಲಿ ಚೈತನ್ಯ ಸೇವಾ ಸಮಿತಿಯ ವತಿಯಿಂದ ಏರಿ​‍್ಡಸಿದ್ದ ಗೂಗಲ್ ಅಜ್ಜಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೂರಣ ಅನಾವರಣಗೊಳಿಸಿ ಮಾತನಾಡಿದರು. ಯಾವುದೇ ಪುಸ್ತಕ, ಕವನ ಸಂಕಲನ , ಕೃತಿ ಬಿಡುಗಡೆ ಅಥವಾ ವಿಮರ್ಶೆ ಮಾಡುವುದು ಕೂಸನ್ನು ತೊಟ್ಟಿಲಕ್ಕೆ ಹಾಕಿದಂತಹ ಪರಿಸ್ಥಿತಿ ಎದುರಾಗುವುದು ಸಹಜ  ಎಂದರು.  ಗೂಗಲ್ ಅಜ್ಜಿ ಪುಸ್ತಕವನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದ ಮಾಡಿರುವುದು ಸ್ತುತ್ಯಾರ್ಹ  ಕಾರ್ಯವಾಗಿದೆ. ಪುಸ್ತಕದ ಕೇಂದ್ರ ಬಿಂದು ಅಜ್ಜಿಯ ಅನುಭವಗಳು ಇಲ್ಲಿ ಕೇಂದ್ರೀಕೃತವಾಗಿರುವುದು ಹಾಗೂ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವುದು ಹೆಮ್ಮೆ ತರುವ ವಿಷಯವಾಗಿದೆ ಎಂದರು.  

 ಆದರೆ ವೈಜ್ಞಾನಿಕ, ತಂತ್ರಜ್ಞಾನ, ಆಧುನಿಕತೆಯ ಇಂದಿನ ದಿನಮಾನಗಳಲ್ಲಿ ಬಹುಪಾಲು ಕಥೆ ಹೇಳುವ ಅಜ್ಜಿಯರೇ  ಇಂದು  ಸಮಾಜದಲ್ಲಿ ಇಲ್ಲದಂತಾಗಿದೆ.  ಆದರೆ ಇಂದಿ ಅಜ್ಜಿಯರಲ್ಲೂ ಮೊದಲಿನ ಅಜ್ಜಿಯರ ಅನುಭವ ಕಾಣಿಸುತ್ತಿಲ್ಲದಿರುವುದು ನೋವಿನ ಸಂಗತಿಯಾಗಿದೆ.    

ಇಂದಿನ ಕಲಿಯುಗದಲ್ಲಿ ಬಹುತೇಕರು ಅಜ್ಜಿಯರೇ ಆಗುತ್ತಿಲ್ಲದಿರುವುದು ನೋವುಂಟಾದರೂ ಮೊಮ್ಮಕ್ಕಳೇ ಅಜ್ಜಿಯರಿಗೆ ಮೊಬೈಲ್ ಮೂಲಕ  ವ್ಯಾಟ್ಸಾಪ್, ಪೇಸಬುಕ್, ಇನಸ್ಟಾಗ್ರಾಮ್ ನಂತಹ  ಪಾಠ ಹೇಳುವಂತಹ ಪರಿಸ್ಥಿತಿ ಎದುರಾಗಿರುವುದು   ವಿಷಾಧಕರ ಸಂಗತಿಯಾಗಿದೆ.   

 ಇದೀಗ  ಎಲ್ಲವೂ ಗೂಗಲ್ ಮಯವಾಗಿ ಎಲ್ಲರ ಮನದೊಳಗೆ ಹಾಸುಹೊಕ್ಕಾಗಿ ಸಂಸ್ಕೃತಿ, ಸಂಸ್ಕಾರಕ್ಕೆ ಧಕ್ಕೆ ಉಂಟಾಗುತ್ತಿದೆ. ಯಂತ್ರವೇ ಇಂದು ಜೀವನದ ಅವಿಭಾಜ್ಯದ ತಂತ್ರವಾಗಿದೆ. ಗೂಗಲ್ ಅನ್ವೇಷಣೆಯಿಂದಾಗಿ ಭಾಷೆಯ ಗೊಂದಲ ಉಂಟಾಗುತ್ತಿದೆ. ಪುಸ್ತಕ ಓದುವವರು ಕಡಿಮೆಯಾಗಿದ್ದಾರೋ ಅಥವಾ ಓದುವಂತಹ ಪುಸ್ತಕ ಇಂದು ಬರುತ್ತಿಲ್ಲವೋ ಎಂಬ ಜಿಜ್ಞಾಸೆಯ ಭಾವಯೋಗದಲ್ಲಿ ಜನರು ಮುಳುಗಿದ್ದಾರೆ ಎಂದರು.  

 ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನಿಧ್ಯ ವಹಿಸಿ ಮಾತನಾಡಿ ಭಾರತೀಯ ಸಂಸ್ಕೃತಿಯು ಇಂದು ವಿಶ್ವಕ್ಕೆ ದಾರೀದೀಪವಾಗಿದೆ. ವಿದೇಶಗಳಲ್ಲೂ ಭಾರತೀಯ ಸಂಸ್ಕೃತಿಯ ಆಚರಣೆಯ ಪದ್ಧತಿ ಇದೆ ಎಂದು ತಿಳಿದು ನಾವೆಲ್ಲ ಹೆಮ್ಮೆ ಪಡಬೇಕಾಗಿದೆ ಎಂದರು.   

 ಸಂಸ್ಕೃತಿ, ಸಂಸ್ಕಾರದ ಬೀಡಾಗಿರುವ ಭಾರತದಲ್ಲಿ ಶಾಸ್ತ್ರಗಳೇ ಪದ್ದತಿಗಳಾಗಿವೆ, ಕಾನೂನುಗಳಾಗಿವೆ. ಯಾರೂ ಸಹ  ಪ್ರಶ್ನೆ ಮಾಡುವ ಗೋಜಿಗೆ ಹೋಗಲಾರದಷ್ಟು ನಾವುಗಳೆಲ್ಲರೂ ಅವುಗಳನ್ನು ಅನುಕರಣೆ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ. ಬದುಕಿನಲ್ಲಿ ಅಜ್ಜಿಯವರ ಪಾತ್ರ ದೇವರಿಗೆ ಸಮಾನಾಗಿದೆ ಎಂದರು.   

 ಸಮಿತಿಯ ಅಧ್ಯಕ್ಷ ಗುರುರಾಜ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏರ್ ಕಮಾಂಡರ್ ಅರುಣಕುಮಾರ ಬೇವಿನಮರದ ಪುಸ್ತಕ ಬಿಡುಗಡೆಗೊಳಿಸಿದರು.  ಇದೇ ಸಂದರ್ಭದಲ್ಲಿ ಸಾಹಿತಿ, ವಿಮರ್ಶಕ ಬಸವಂತಪ್ಪ ಎಲಿಗಾರರ ನಿಧನಕ್ಕೆ ಮೌನಾಚರಣೆ ಸಲ್ಲಿಸಿ ಅವರ ಸ್ಮರಣೆ ಮಾಡಲಾಯಿತು. ಲೇಖಕರಾದ ತರುಣಕುಮಾರ್ ಜೂಜಾರೆ, ನಿವೇದಿತಾ ಜೂಜಾರೆ,  

ಶಶಿಕಲಾ ಎಲಿಗಾರ್, ವೃತ್ತ ಪ್ರಾಂಶುಪಾಲ ಧೀರೇಂದ್ರ ಏಕಬೋಟೆ, ರಾಜೇಶ್ವರಿ ಏಕಬೋಟೆ,  ವೆಂಕಟೇಶ ಕುಲಕರ್ಣಿ, ನರೇಂದ್ರ ಏಕಬೋಟೆ ಸೇರಿದಂತೆ  ಚೈತನ್ಯ ಸೇವಾ ಸಮಿತಿಯ ಸದಸ್ಯರುಗಳು, ಮತ್ತಿತರರು ಇದ್ದರು.